ಬಜೆಟ್-2026 : ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ 10000 ಕೋಟಿ ರೂ. ಬೆಳವಣಿಗೆ ನಿಧಿ, ಬಯೋ ಫಾರ್ಮಾ ಶಕ್ತಿ’ ಯೋಜನೆಗೆ 10000 ಕೋಟಿ ರೂ.

ಕೇಂದ್ರ ಬಜೆಟ್ 2026 ಫೆಬ್ರವರಿ 1 ಭಾನುವಾರ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡನೆ ಆರಂಭಿಸಿದ್ದಾರೆ. ಕರ್ತವ್ಯ ಭವನದಲ್ಲಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದ್ದು , 3 ಕರ್ತವ್ಯಗಳಿಗೆ ಬಜೆಟ್‌ ಒತ್ತು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  2026-2027ರ ಬಜೆಟ್‌ನಲ್ಲಿ ಭಾರತದ ಸಣ್ಣ ಉದ್ಯಮಗಳಿಗೆ (MSME) ಹೊಸ ಉತ್ತೇಜನ ನೀಡಿದ್ದಾರೆ. ಹೊಸ ನಿಧಿಗಳು, ಪುನಶ್ಚೇತನಗೊಂಡ ಕ್ಲಸ್ಟರ್‌ಗಳು ಮತ್ತು ಸುಧಾರಿತ ಸಾಲದ ವ್ಯವಸ್ಥೆಯ ಮೂಲಕ ಎಂಎಸ್‌ಎಂಇ ವಲಯವನ್ನು ಬಲಪಡಿಸುವ ಗುರಿಯನ್ನು ಈ ಬಜೆಟ್ ಹೊಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಂಡವಾಳ, ಮಾರುಕಟ್ಟೆ ಮತ್ತು ಬಾಕಿ ಹಣವನ್ನು ಪಡೆಯುವ ವಿಧಾನದಲ್ಲಿ ಈ ಘೋಷಣೆಗಳು ಮಹತ್ವದ ಬದಲಾವಣೆಯನ್ನು ತರಲಿವೆ.
ಹಳೆಯ ಕೈಗಾರಿಕಾ ವಲಯಗಳ ಪುನಶ್ಚೇತನ
ಸಾಲದ ಒತ್ತಡ ಮತ್ತು ಹಳೆಯ ತಂತ್ರಜ್ಞಾನದಿಂದಾಗಿ ಸೊರಗಿರುವ 200 ಪಾರಂಪರಿಕ ಕೈಗಾರಿಕಾ ಕ್ಲಸ್ಟರ್‌ಗಳನ್ನು ಪುನಶ್ಚೇತನಗೊಳಿಸಲು ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಮರೆತುಹೋದ ಉತ್ಪಾದನಾ ವಲಯಗಳನ್ನು ಮರುಸ್ಥಾಪಿಸಲು ಸಹಕಾರಿಯಾಗಲಿದೆ.
ಎಸ್‌ಎಂಇ (SME) ಬೆಳವಣಿಗೆ ನಿಧಿ
ಉತ್ತಮ ಸಾಮರ್ಥ್ಯವಿರುವ ಸಂಸ್ಥೆಗಳ ಬೆಳವಣಿಗೆಗಾಗಿ ₹10,000 ಕೋಟಿ ಮೌಲ್ಯದ ‘SME Growth Fund’ ಅನ್ನು ಪರಿಚಯಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ. ಉತ್ಪಾದಕತೆ, ಔಪಚಾರಿಕೀಕರಣ ಮತ್ತು ರಫ್ತು ಸಿದ್ಧತೆಯಂತಹ ಮಾನದಂಡಗಳನ್ನು ಪೂರೈಸುವ ಉದ್ಯಮಗಳಿಗೆ ಈ ನಿಧಿಯ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ.
ಕಿರು ಉದ್ಯಮಗಳಿಗೆ ಬೆಂಬಲ
ಸಣ್ಣ ಉದ್ಯಮಗಳ ಸುಸ್ಥಿರತೆಗಾಗಿ ‘ಸ್ವಾವಲಂಬಿ ಭಾರತ ನಿಧಿ’ಗೆ (Self-Reliant India Fund) ₹2,000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗುತ್ತದೆ. ಸಾಲ ಖಾತರಿ ಯೋಜನೆಗಳಿದ್ದರೂ ಬಂಡವಾಳದ ಕೊರತೆ ಎದುರಿಸುತ್ತಿರುವ ಕಿರು ಉದ್ಯಮಗಳಿಗೆ ಇದು ನೆರವಾಗಲಿದೆ.
MSME ಗಳನ್ನು ಬೆಂಬಲಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು FY27 ರಲ್ಲಿ ಸ್ವಾವಲಂಬನೆ ಭಾರತ ನಿಧಿಗೆ ರೂ. 4,000 ಕೋಟಿಗಳನ್ನು ನೀಡಲು ಪ್ರಸ್ತಾಪಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ
ಸರ್ಕಾರದ ಇ-ಮಾರುಕಟ್ಟೆ (GeM) ಪೋರ್ಟಲ್ ಅನ್ನು ವ್ಯಾಪಾರ ಕರಾರುಗಳ ರಿಯಾಯಿತಿ ವ್ಯವಸ್ಥೆಯೊಂದಿಗೆ (TReDS) ಜೋಡಿಸಲಾಗುತ್ತದೆ. ಇದರಿಂದ ಎಂಎಸ್‌ಎಂಇ ಪೂರೈಕೆದಾರರಿಗೆ ತಮ್ಮ ಪಾವತಿ ಚಕ್ರದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಹೊಸ ಲಿಕ್ವಿಡಿಟಿ ಮಾರ್ಗ: ವ್ಯಾಪಾರ ಕರಾರುಗಳ ರಿಯಾಯಿತಿ ವ್ಯವಸ್ಥೆ (TReDS) ಕರಾರುಗಳನ್ನು (Receivables) ‘ಆಸ್ತಿ-ಬೆಂಬಲಿತ ಸೆಕ್ಯೂರಿಟಿಗಳಾಗಿ’ (Asset-backed securities) ಪರಿವರ್ತಿಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಿ, ಈ ವಲಯದಲ್ಲಿ ಹಣದ ಹರಿವನ್ನು ಹೆಚ್ಚಿಸಲಿದೆ ಎಂದು ನಿರಕ್ಷಿಸಲಾಗಿದೆ.
ಮುಂದಿನ 5 ವರ್ಷಗಳಲ್ಲಿ ಬಯೋಫಾರ್ಮಾದಲ್ಲಿ 10,000 ಕೋಟಿ ರೂ. ಹೂಡಿಕೆ
ಸರ್ಕಾರವು ಬಯೋಫಾರ್ಮಾ ವಲಯಕ್ಕೆ 10,000 ಕೋಟಿ ರೂ.ಗಳನ್ನು ಹಂಚಿಕೆ ಮಾಡುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
“ಬೆಳವಣಿಗೆಯನ್ನು ವೇಗಗೊಳಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರ ಸಮಗ್ರ ಸುಧಾರಣೆಗಳನ್ನು ಕೈಗೊಂಡಿದೆ. ಇತ್ತೀಚೆಗೆ 350 ಕ್ಕೂ ಹೆಚ್ಚು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಸುಧಾರಣಾ ಕ್ರಮಗಳು ಸರಿಯಾದ ಹಾದಿಯಲ್ಲಿವೆ ಎಂದು ಹೇಳಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement