ಇಂಧನ ನಿಯಂತ್ರಣ ಸ್ವಿಚ್ ಸಮಸ್ಯೆ ; ಲಂಡನ್‌-ಬೆಂಗಳೂರು ವಿಮಾನ ಹಾರಾಟ ಸ್ಥಗಿತ

ಬೆಂಗಳೂರು: ಲಂಡನ್‌ನಿಂದ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿ (Grounded) ತಪಾಸಣೆಗೆ ಒಳಪಡಿಸಲಾಗಿದೆ.
ಸೋಮವಾರ ಲಂಡನ್‌ನಿಂದ ಬೆಂಗಳೂರಿಗೆ ಹೊರಡಬೇಕಿದ್ದ AI 132 ವಿಮಾನದ ‘ಫ್ಯುಯೆಲ್ ಕಂಟ್ರೋಲ್ ಸ್ವಿಚ್’ನಲ್ಲಿ (ಇಂಧನ ನಿಯಂತ್ರಣ ಸ್ವಿಚ್) ದೋಷವಿರಬಹುದು ಎಂದು ಪೈಲಟ್ ವರದಿ ಮಾಡಿದ್ದರು. ವಿಮಾನ ಹಾರಾಟಕ್ಕೂ ಮುನ್ನ ನಡೆಸುವ ತಪಾಸಣಾ ಪ್ರಕ್ರಿಯೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಏರ್ ಇಂಡಿಯಾ ಸಿಬ್ಬಂದಿ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಹಾರಾಟದಿಂದ ಹೊರಗಿಟ್ಟಿದ್ದಾರೆ.
ತಯಾರಕ ಸಂಸ್ಥೆಯೊಂದಿಗೆ ಸಮಲೋಚನೆ:
ಈ ಕುರಿತು ಹೇಳಿಕೆ ನೀಡಿರುವ ಏರ್ ಇಂಡಿಯಾ, “ನಮ್ಮ ಪೈಲಟ್ ಒಬ್ಬರು ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನ ತಯಾರಕ ಸಂಸ್ಥೆಯಾದ ಬೋಯಿಂಗ್ (OEM) ಸಹಯೋಗದೊಂದಿಗೆ ಆದ್ಯತೆಯ ಮೇರೆಗೆ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಅಧಿಕೃತವಾಗಿ ಮಾಹಿತಿ ನೀಡಲಾಗಿದ್ದು, ತಾಂತ್ರಿಕ ತಂಡವು ಹೆಚ್ಚಿನ ತಪಾಸಣೆ ನಡೆಸುತ್ತಿದೆ.
ವಿಮಾನದಲ್ಲಿ ಇಂಧನ ಸ್ವಿಚ್ ಎಂದರೇನು?
ಇಂಧನ ಸ್ವಿಚ್‌ಗಳು ವಿಮಾನದ ಎಂಜಿನ್‌ಗಳಿಗೆ ಇಂಧನದ ಹರಿವನ್ನು ನಿಯಂತ್ರಿಸುವ ಸ್ವಿಚ್‌ಗಳಾಗಿವೆ.  ಪೈಲಟ್‌ಗಳು ನೆಲದ ಮೇಲೆ ಎಂಜಿನ್‌ಗಳನ್ನು ಸ್ಟಾರ್ಟ್ ಮಾಡಲು ಅಥವಾ ನಿಲ್ಲಿಸಲು ಅಥವಾ ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯದ ಸಂದರ್ಭದಲ್ಲಿ ಎಂಜಿನ್‌ಗಳನ್ನು ಹಸ್ತಚಾಲಿತವಾಗಿ ಪ್ರಾರಂಭಿಸಲು ಅಥವಾ ನಿಲ್ಲಿಸಲು ಇವುಗಳನ್ನು ಬಳಸುತ್ತಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement