ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಅಧಿಕಾರಿಗೂ ಬಡ್ತಿ…! ರಾಜ್ಯ ಸರ್ಕಾರದ ಎಡವಟ್ಟು ಬಹಿರಂಗಗೊಳಿಸಿದ ಆರ್‌. ಅಶೋಕ

ಬೆಂಗಳೂರು: ಸ್ವಯಂ ನಿವೃತ್ತಿ ಪಡೆದು ಸ್ವಾಮೀಜಿಯಾದ ಕೆಎಎಸ್‌ ಅಧಿಕಾರಿಗೂ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಪಕ್ಷದ ನಾಯಕ ಆರ್‌ ಅಶೋಕ ದಾಖಲೆ ಬಹಿರಂಗ ಪಡೆಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಶೋಕ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ  ಹೆಚ್.ಎಲ್. ನಾಗರಾಜ (ಪ್ರಸ್ತುತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ) ಅವರ ಹೆಸರೂ ಸೇರಿದೆ. ನಿಮ್ಮ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಈಗ ಯಾವ ಮಟ್ಟಕ್ಕೆ ತಲುಪಿದೆ ಗೊತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಸೇವೆಯಿಂದ ಸ್ವಯಂನಿವೃತ್ತರಾಗಿ ಕಾವಿ ಧರಿಸಿ ಪೀಠಾಧಿಪತಿಯಾಗಿರುವವರಿಗೂ “ಬಡ್ತಿ ಭಾಗ್ಯ” ನೀಡಲಾಗಿದೆ. ನಿಮ್ಮ ಘನಂದಾರಿ ಆಡಳಿತದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸಹಿ ಮಾಡುವ ಮುನ್ನ ಫೈಲುಗಳನ್ನು ಓದುತ್ತಾರೋ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ? ನಿಮ್ಮ
ಸರ್ಕಾರಕ್ಕೆ ಯಾವ ಅಧಿಕಾರಿಗಳು ಸೇವೆಯಲ್ಲಿ ಇದ್ದಾರೆ, ಯಾರು ನಿವೃತ್ತರಾಗಿದ್ದಾರೆ ಎನ್ನುವ ಕನಿಷ್ಠ ಮಾಹಿತಿಯೂ ಗೊತ್ತಿಲ್ಲದಿದ್ದರೆ, ರಾಜ್ಯದ ಜನತೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಎಂದು ಪ್ರಶ್ನಿಸಿದ್ದಾರೆ.

ಇವತ್ತು ನಿವೃತ್ತರಾಗಿರುವ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿದ್ದೀರಿ, ನಾಳೆ ನಿಧನ ಹೊಂದಿರುವ ಅಧಿಕಾರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಕೇವಲ ಒಂದು ಆಕಸ್ಮಿಕ ಯಡವಟ್ಟು ಅಲ್ಲ. ದಿನಕ್ಕೊಂದು ಎಡವಟ್ಟು, ಕ್ಷಣಕ್ಕೊಂದು ಮುಖಭಂಗ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆ. ಎಡವಟ್ಟು ಸರ್ಕಾರಕ್ಕೆ ಎಡವಟ್ಟು ಮುಖ್ಯಮಂತ್ರಿ ಆಗಿ ತಮ್ಮ ಗೌರವ ಕಳೆದುಕೊಳ್ಳುತ್ತೀರಿ ಎಂದು ಅಶೋಕ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement