ರಾಜೀನಾಮೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲೇ ಯು ಟರ್ನ್‌ ಹೊಡೆದ ಕಾಂಗ್ರೆಸ್ ನಾಯಕ…

ಗುವಾಹತಿ: ಅಸ್ಸಾಂ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು, ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಸುಮಾರು 32 ವರ್ಷಗಳ ದೀರ್ಘಕಾಲದ ಪಕ್ಷದ ಬಾಂಧವ್ಯವನ್ನು ತೊರೆಯುವುದಾಗಿ ಘೋಷಿಸಿದ ಅವರು, ‘ತಮ್ಮ ಸ್ವಾಭಿಮಾನ ರಕ್ಷಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವುದಾಗಿ’ ಇಂದು ಬೆಳಗ್ಗೆ ತಿಳಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದ ಕಂಗೆಟ್ಟ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಕಾರ್ಯಾಚರಣೆಗೆ ಇಳಿಯಿತು.
ಸ್ವತಃ ರಾಹುಲ್ ಗಾಂಧಿ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ನಂತರ ಲೋಕಸಭೆಯ ವಿಪಕ್ಷದ ಉಪನಾಯಕ ಗೌರವ್ ಗೊಗೊಯ್ ಅವರು ಬೋರಾ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ಮಹತ್ವದ ಸಭೆಯ ನಂತರ “ತಮ್ಮ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸಲು ಒಂದು ದಿನದ ಕಾಲಾವಕಾಶ ಬೇಕು” ಎಂದು ಹೇಳುವ ಮೂಲಕ ಸದ್ಯದ ಮಟ್ಟಿಗೆ ಕಾಂಗ್ರೆಸ್‌ಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಸೋಮವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭೂಪೇನ್ ಬೋರಾ, ತಾವು ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ರವಾನಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ರಾಜೀನಾಮೆಗೆ ನಿಖರ ಕಾರಣವೇನು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. “ನಾನು ರಾಜೀನಾಮೆ ನೀಡಿರುವುದು ನಿಜ. ಆದರೆ ಈಗಲೇ ಅದರ ಬಗ್ಗೆ ವಿವರ ನೀಡುವುದು ಅಗತ್ಯವೆಂದು ನನಗೆ ಅನ್ನಿಸುತ್ತಿಲ್ಲ. ಕಾಲ ಬಂದಾಗ ಖಂಡಿತವಾಗಿಯೂ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಆಂತರಿಕ ಭಿನ್ನಮತದ ಸುಳಿವು
 ಆಂತರಿಕ ಸಮಸ್ಯೆಗಳಿಂದ ಬೆಳವಣಿಗೆಗಳು ಉಂಟಾಗಿವೆ ಎಂದು ಬೋರಾ ಸುಳಿವು ನೀಡಿದರು. ಇತ್ತೀಚಿನ ‘ಬೆಹಾಲಿ’ ವಿದ್ಯಮಾನ ಮತ್ತು ‘ಮಜುಲಿ ಯಾತ್ರೆ’ಯ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬೆಹಾಲಿ ಘಟನೆಯಿಂದಲೇ ಇದೆಲ್ಲವೂ ಆರಂಭವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಮಜುಲಿ ಯಾತ್ರೆಯಲ್ಲಿ ಯಾರನ್ನು ಜೊತೆಗೆ ಕರೆದುಕೊಂಡು ಹೋಗಬೇಕು ಎಂಬುದನ್ನು ನಿರ್ಧರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗದಿದ್ದರೆ, ಪಕ್ಷದ ಭವಿಷ್ಯದ ಬಗ್ಗೆ ನಾವು ಯೋಚಿಸಬೇಕಾಗುತ್ತದೆ,” ಎಂದು ಹೇಳುವ ಮೂಲಕ ಪಕ್ಷದ ಆಂತರಿಕ ನಿರ್ಧಾರಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹೈಕಮಾಂಡ್ ಮಧ್ಯಪ್ರವೇಶ
ಬೋರಾ ಅವರ ಈ ನಿರ್ಧಾರದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭೂಪೇನ್ ಬೋರಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೋಗೋಯ್, “ಹೈಕಮಾಂಡ್ ಬೋರಾ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಬೋರಾ ಅವರು ಹೈಕಮಾಂಡ್‌ನಿಂದ ಸ್ವಲ್ಪ ಸಮಯಾವಕಾಶ ಕೇಳಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಭೂಪೇನ್ ಬೋರಾ ಅವರು 2021 ರಿಂದ 2025 ರವರೆಗೆ  ಕಾಂಗ್ರೆಸ್ಸಿನ ಅಸ್ಸಾಂ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷವಷ್ಟೇ ಅವರ ಜಾಗಕ್ಕೆ ಗೌರವ್ ಗೋಗೋಯ್ ಅವರನ್ನು ನೇಮಿಸಲಾಗಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೋರಾ, ಅಸ್ಸಾಂ ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement