ಧಾರವಾಡ : ಕೆಡಿಪಿ ಸಭೆಯಲ್ಲಿ ಸಚಿವ ಲಾಡ್-ಕಾಂಗ್ರೆಸ್‌ ಪರಿಷತ್‌ ಸದಸ್ಯ ಜಕ್ಕಪ್ಪನವರ ತೀವ್ರ ಜಟಾಪಟಿ

ಧಾರವಾಡ : ಸೋಮವಾರ ಧಾರವಾಡದಲ್ಲಿ ನಡೆದ ಜಿಲ್ಲಾ ಪಂಚಾಯತ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಅನುದಾನ ಬಳಕೆ ಹಾಗೂ ಸೌಲಭ್ಯ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹಾಗೂ ಕಾಂಗ್ರೆಸ್ಸಿನ ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌ ಜಕ್ಕಪ್ಪನವರ ಮಧ್ಯೆ ತೀವ್ರ ಜಟಾಪಟಿ ನಡೆದಿದೆ.
ಇಬ್ಬರು ನಾಯಕರು ಕಾಂಗ್ರೆಸ್‌ ಪಕ್ಷದ ಜನಪ್ರತಿನಿಧಿಗಳು ಎಂಬುದು ವಿಶೇಷ. ಸಭೆಯಲ್ಲಿ ಸಚಿವ ಲಾಡ್‌ ಒಂದೊಂದೇ ಇಲಾಖೆ ಪ್ರಗತಿ ಪರಿಶೀಲಿಸುತ್ತಿದ್ದರು. ಆಗ ಸಮಾಜ ಕಲ್ಯಾಣ ಇಲಾಖೆ ಬಗ್ಗೆ ಜಕ್ಕಪ್ಪನವರ ಜೋರಾಗಿ ಮಾತನಾಡಲುಆರಂಭಿಸಿದರು. ಆಗ ನಿಧಾನವಾಗಿ ಮಾತನಾಡಿ ಎಂದು ಸಚಿವ ಲಾಡ್‌ ಹೇಳುತ್ತಿದ್ದಂತೆಯೇ ಶಾಸಕ ಜಕ್ಕಪ್ಪನವರ, ‘ಧಾರವಾಡ ಜಿಲ್ಲಾಡಳಿತ ಎಸ್‌ಸಿ/ಎಸ್‌ಟಿ ಬಗ್ಗೆ ನಿಷ್ಕಾಳಜಿ ತೋರುತ್ತಿದೆ. ಅವರ ಪರವಾಗಿ ನಾನು ಪರ ಧ್ವನಿ ಎತ್ತುತ್ತಿದ್ದೇನೆ ಎಂದು ಜೋರಾಗಿಯೇ ಹೇಳಿದರು.

” ಎಸ್‌ಸಿ/ಎಸ್‌ಟಿ ಸಮುದಾಯದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ” ಎಂದು ಜಕ್ಕಪ್ಪನವರ ಸಭೆಯಲ್ಲಿ ಹೇಳಿದಾಗ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಂತೋಷ್ ಲಾಡ್ ಈ ಆರೋಪವನ್ನು ತಳ್ಳಿಹಾಕಿದರು ಮತ್ತು ಎಲ್ಲಾ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಕಷ್ಟು ಸಮಯ ನೀಡಲಾಗುತ್ತಿದೆ, ಈ ರೀತಿ ಸುಮ್ಮನೆ ಆರೋಪ ಮಾಡಬೇಡಿ’ ಎಂದು ಹೇಳಿದರು.
ಇದರಿಂದ ಸಿಡಿಮಿಡಿಗೊಂಡ ಜಕ್ಕಪ್ಪನವರ, ‘ನನ್ನ ಧ್ವನಿಯೇ ಹೀಗಿದೆ. ನೀವು ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಹೇಳುವುದನ್ನೂ ಕೇಳುತ್ತಿಲ್ಲ. ಹೀಗಾದಲ್ಲಿ ನಾನು ಸಭೆಯಿಂದ ಹೋಗುತ್ತೇನೆ’ ಎಂದರು. ಆಗ ಸಚಿವರು ‘ನಾನು ನಿಮಗೆ ಹೊರಗೆ ಹೋಗಿ ಎಂದು ಹೇಳುತ್ತಿಲ್ಲ ನೀವು ಹೊರಹೋಗಲು ಬಯಸಿದರೆ,  ಹೋಗಬಹುದು” ಎಂದು ಹೇಳಿದರು. ಆಗ ಜಕ್ಕಪ್ಪನವರ ಸಭೆಯಿಂದ ಹೊರ ನಡೆಯಲು ಮುಂದಾದರು. ನಂತರ ಹಿರಿಯ ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು.

ಮಾತು ಮುಂದುವರಿಸಿದ ಜಕ್ಕಪ್ಪನವರ, ‘ಒಬ್ಬ ಶಾಸಕನಿಗೆ ಸಚಿವರು ಹೀಗೆ ಹೇಳುವುದು ಸರಿಯಲ್ಲ. ಸಮಾಜ ಕಲ್ಯಾಣ ಇಲಾಖೆ ಆದಿಯಾಗಿ ಜಿಲ್ಲಾಡಳಿತ ನಮಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು. ಮಧ್ಯೆ ಪ್ರವೇಶಿಸಿದ ಸಚಿವ ಲಾಡ್‌, ‘ನಾನು ಎದ್ದು ಹೋಗಿ ಅಂದಿಲ್ಲ. ಬೇಕಿದ್ದರೆ ನಾನೇ ಸಭೆಯಿಂದ ಹೊರನಡೆಯುತ್ತೇನೆ. ಸುಮ್ಮನೆ ಆರೋಪ ಮಾಡಬೇಡಿ. ನಿಮಗೆ ಮಾತನಾಡಲೂ ಅವಕಾಶ ನೀಡಲಾಗಿದೆ’ ಎಂದರು. ನಂತರ ಸಭೆಯಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಬ್ಬರನ್ನೂ ಸಮಾಧಾನಪಡಿಸಿದರು.
ಸಂತೋಷ್ ಲಾಡ್ ಧಾರವಾಡ ಜಿಲ್ಲೆಯ ಕಲಘಟಗಿ-ಅಳ್ನಾವರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಜಕ್ಕಪ್ಪನವರ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement