ನವದೆಹಲಿ: ಭಾರತದ ಆರ್ಥಿಕತೆಯು 2025ರ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಒಟ್ಟು ಆಂತರಿಕ ಉತ್ಪನ್ನ (GDP) ಲೆಕ್ಕಾಚಾರದ ಪರಿಷ್ಕೃತ ಪದ್ಧತಿಯ ಅಡಿಯಲ್ಲಿ ದೇಶದ ಆರ್ಥಿಕತೆಯು ಸದೃಢವಾಗಿ ವಿಸ್ತರಣೆಯಾಗುತ್ತಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ವೃದ್ಧಿ ದರವು ಶೇ. 7.8 ರಷ್ಟಿದೆ. 2022-23ನ್ನು ಆಧಾರ ವರ್ಷವನ್ನಾಗಿ ಹೊಂದಿರುವ ಹೊಸ ಸರಣಿಯ ಪ್ರಕಾರ, ಕಳೆದ ವರ್ಷದ ಇದೇ ಅವಧಿಯಲ್ಲಿನ ಶೇ. 7.4 ಕ್ಕೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.
ಶುಕ್ರವಾರದಂದು ಸಚಿವಾಲಯವು 2022-23ನೇ ಸಾಲನ್ನು ಆಧಾರ ವರ್ಷವಾಗಿಟ್ಟುಕೊಂಡು ರಾಷ್ಟ್ರೀಯ ಲೆಕ್ಕಪತ್ರ ಅಂದಾಜುಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಮೊದಲು 2011-12ನ್ನು ಆಧಾರ ವರ್ಷವಾಗಿ ಬಳಸಲಾಗುತ್ತಿತ್ತು.
ಪ್ರಸಕ್ತ ಹಣಕಾಸು ವರ್ಷದ ಅಂದಾಜು: ಹೊಸ ಸರಣಿಯ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಶೇ. 7.6 ರಷ್ಟು ಬೆಳೆಯುವ ನಿರೀಕ್ಷೆಯಿದೆ (ಜನವರಿಯಲ್ಲಿ ಇದು ಶೇ. 7.4 ಇರಬಹುದು ಎಂದು ಅಂದಾಜಿಸಲಾಗಿತ್ತು).
ಜುಲೈ-ಸೆಪ್ಟೆಂಬರ್ ಅವಧಿಯ ಬೆಳವಣಿಗೆ ದರವನ್ನು ಶೇ. 8.2 ರಿಂದ ಶೇ. 8.4 ಕ್ಕೆ ಏರಿಸಲಾಗಿದೆ. ಆದರೆ, ಮೊದಲ ತ್ರೈಮಾಸಿಕದ ಬೆಳವಣಿಗೆಯನ್ನು ಶೇ. 7.8 ರಿಂದ ಶೇ. 6.7 ಕ್ಕೆ ಇಳಿಸಲಾಗಿದೆ.
ಆರ್ಥಿಕ ದತ್ತಾಂಶವನ್ನು ಹೆಚ್ಚು ನಿಖರಗೊಳಿಸಲು ಹೊಸ ಮಾಪನ ಪದ್ಧತಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ದತ್ತಾಂಶ, ಇ-ವಾಹನ (e-Vahan) ನೋಂದಣಿ ಮಾಹಿತಿ, ಮನೆಯಲ್ಲಿ ಕೆಲಸ ಮಾಡುವ ಅಡುಗೆಯವರು, ಚಾಲಕರು ಮತ್ತು ಮನೆಗೆಲಸದವರು ನೀಡುವ ಸೇವೆಗಳನ್ನು ಸೇರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ