ನವದೆಹಲಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎನ್ಡಿಎ (NDA) ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರವನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ಬಹಿರಂಗಪಡಿಸಿದ್ದಾರೆ.
ಈ ಒಪ್ಪಂದದಂತೆ ಬಿಜೆಪಿ 89 ಸ್ಥಾನಗಳಲ್ಲಿ, ಅದರ ಮಿತ್ರಪಕ್ಷವಾದ ಅಸೋಮ್ ಗಣ ಪರಿಷತ್ (AGP) 26 ಸ್ಥಾನಗಳಲ್ಲಿ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF) 11 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಬಿಜೆಪಿಯ ಪ್ರಾಥಮಿಕ ಸಭೆಯ ನಂತರ ಅವರು ಈ ಘೋಷಣೆ ಮಾಡಿದ್ದು, ಮೈತ್ರಿ ಒಪ್ಪಂದವನ್ನು ಅಂತಿಮಗೊಳಿಸಲು ಬುಧವಾರ (ಮಾರ್ಚ್ ೧೮) ಸಂಸದೀಯ ಮಂಡಳಿಯ ಸಭೆ ನಡೆಯಲಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಿಜೆಪಿಯು ಅಸ್ಸಾಂ ಚುನಾವಣೆಯ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ರಾತ್ರಿ ಅಥವಾ ಗುರುವಾರ ಬೆಳಿಗ್ಗೆ ಪ್ರಕಟಿಸಲಿದೆ ಎಂದು ಶರ್ಮಾ ಹೇಳಿದರು. “ಇಂದು ನಾವು ಪಕ್ಷದ ಪಟ್ಟಿಯ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದೇವೆ. ಗುರುವಾರ ನಮ್ಮ ಸಂಸದೀಯ ಮಂಡಳಿಯ ಸಭೆ ಇದೆ. ಎಂದು ಅವರು ತಿಳಿಸಿದರು.
ನಗಾಂವ್ನ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಅವರು ಪಕ್ಷಾಂತರ ಮಾಡಿ ಬಿಜೆಪಿ ಟಿಕೆಟ್ ಪಡೆಯಬಹುದು ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ನಾನು ಅವರೊಂದಿಗೆ ಸಂಪರ್ಕದಲ್ಲಿಲ್ಲ. ಒಂದು ವೇಳೆ ಅವರು ಕೇಂದ್ರ ಗೃಹ ಸಚಿವರೊಂದಿಗೆ ಮಾತನಾಡಿದ್ದರೆ ನನಗೆ ತಿಳಿಯುತ್ತಿತ್ತು. ಆದರೆ ಅವರು ಇನ್ನೂ ಯಾವುದೇ ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ನನಗನ್ನಿಸುವುದಿಲ್ಲ. ಆದರೂ ಅವರೊಂದಿಗೆ ಸಂಪರ್ಕ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ,” ಎಂದರು.
2021ರ ಚುನಾವಣೆಗೆ ಹೋಲಿಕೆ
2021ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 93 ಸ್ಥಾನಗಳಲ್ಲಿ ಸ್ಪರ್ಧಿಸಿ 60ರಲ್ಲಿ ಗೆಲುವು ಸಾಧಿಸಿತ್ತು. ಅಸೋಮ್ ಗಣ ಪರಿಷತ್ (AGP) ಪಕ್ಷಕ್ಕೆ 25 ಸ್ಥಾನಗಳನ್ನು ನೀಡಲಾಗಿತ್ತು, ಆದರೆ 29ರಲ್ಲಿ ಸ್ಪರ್ಧಿಸಿ 9ರಲ್ಲಿ ಜಯಗಳಿಸಿತ್ತು. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL): 8 ಸ್ಥಾನಗಳನ್ನು ನೀಡಲಾಗಿತ್ತು, ಆದರೆ 11ರಲ್ಲಿ ಸ್ಪರ್ಧಿಸಿ 6ರಲ್ಲಿ ಗೆದ್ದಿತ್ತು. ಒಟ್ಟಾರೆಯಾಗಿ 126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಎನ್ಡಿಎ ಒಕ್ಕೂಟವು 75 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಸಮಯದಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳ ನಡುವೆಯೇ ‘ಸ್ನೇಹಪೂರ್ವಕ ಸ್ಪರ್ಧೆ’ (Friendly fights) ಏರ್ಪಟ್ಟಿತ್ತು ಎಂಬುದು ಗಮನಾರ್ಹ.


ನಿಮ್ಮ ಕಾಮೆಂಟ್ ಬರೆಯಿರಿ