ಹುಬ್ಬಳ್ಳಿ: ಕ್ರ್ಯಾಶ್ ರೀಲ್ಸ್ ವಿಡಿಯೋ (Reels) ಮಾಡಲು ಹೋಗಿ ಬಿಜೆಪಿ ಮುಖಂಡನ ಪುತ್ರ ಗುರುವಾರ ಮೃತಪಟ್ಟಿದ್ದಾನೆ. ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ ಸಂಗಳದ (15) ಮೃತ ಬಾಲಕ ಎಂದು ಗುರುತಿಸಲಾಗಿದೆ. ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ (Hubballi news) ಮನೆಗೆ ಬಂದಿದ್ದ ನಮೀಷ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡ್ಕರ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದಾನೆ.
ರೀಲ್ಸ್ ಮಾಡಲು ಅತಿ ವೇಗದಲ್ಲಿ ಬೈಕ್ ಮತ್ತು ಐಷಾರಾಮಿ ಕಾರು ಚಲಾಯಿಸುವಾಗ ಅಪಘಾತ ಸಂಭವಿಸಿದ್ದು ಬಿಜೆಪಿ ಮುಖಂಡ ವೀರೇಶ ಸಂಗಳದ ಅವರ ಪುತ್ರ ನಮೀಷ ಸಾವು ಕಂಡಿದ್ದಾನೆ.
ಸ್ಟಂಟ್ ಚಿತ್ರೀಕರಣ ಮಾಡಿ ಹೈಸ್ಪೀಡ್ ಬೈಕ್ ಮತ್ತು ಆಡಿ ಕಾರನ್ನು ಬಳಸಿ ಅಪಘಾತಕ್ಕೀಡು ಮಾಡುವುದು ಯೋಜನೆಯಾಗಿತ್ತು. ಅಪಘಾತಕ್ಕೆ ಕಾರಣವಾದ ಆಡಿ ಕಾರನ್ನು ಮತ್ತೊಬ್ಬ 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.
ರೀಲ್‌ಗಳನ್ನು ಚಿತ್ರೀಕರಿಸುತ್ತಿರುವಾಗ, ವೇಗವಾಗಿ ಬಂದ ಕಾರು ನಮೀಷ್ ಸವಾರಿ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣರಾದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೈಸೆನ್ಸ್ ಇಲ್ಲದ ಬಾಲಕನಿಗೆ ಐಷಾರಾಮಿ ಕಾರು ನೀಡಿದ ಪ್ರಕರಣದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ