ಚಿತ್ರದುರ್ಗ : ಪ್ರಾಧ್ಯಾಪಕನ ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ ; ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ: ಪ್ರಾಧ್ಯಾಪಕರೊಬ್ಬರ ಜೊತೆ ಸಂಬಂಧ ಕಲ್ಪಿಸಿ ಸುಳ್ಳು ವದಂತಿ ಹರಡಿ ಸಹಪಾಠಿಗಳು ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತು 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ  ಜಿಲ್ಲೆಯ  ಹೊಳಲ್ಕೆರೆ ನಗರದ ಬಸವ ಲೇಔಟ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಿಖಿತಾ ಎಂ.ಯು (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ಈಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ (BAMS) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿಖಿತಾ ಅವರ ತಂದೆ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

ನಿಖಿತಾ ತನ್ನ ಕಾಲೇಜಿನ ಉಪನ್ಯಾಸಕರೊಬ್ಬರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ, ಇದನ್ನು ತಪ್ಪಾಗಿ ಅರ್ಥೈಸಿದ ಕೆಲವು ಸಹಪಾಠಿಗಳು, ನಿಖಿತಾ ಮತ್ತು ಅವರ ನಡುವೆ ಸಂಬಂಧವಿದೆ ಎಂದು ಸುಳ್ಳು ವದಂತಿಗಳನ್ನು ಹಬ್ಬಿಸಿದ್ದರು. ಸಹಪಾಠಿಗಳ ನಿರಂತರ ಕಿರಕುಳ ಮತ್ತು ಅವಮಾನಕಾರಿ ಮಾತುಗಳಿಂದ ನಿಖಿತಾ ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೋಷಕರು ಮಗಳಿಗೆ ಇಂತಹ ಮಾತುಗಳನ್ನು ನಿರ್ಲಕ್ಷಿಸಿ ವಿದ್ಯಾಭ್ಯಾಸದ ಕಡೆ ಗಮನಹರಿಸುವಂತೆ ಬುದ್ಧಿವಾದ ಹೇಳಿ ಸಮಾಧಾನಪಡಿಸಿದ್ದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಆದರೂ ಸಹಪಾಠಿಗಳ ಕಿರುಕುಳ ನಿಲ್ಲದ ಕಾರಣ, ಮಾನಸಿಕ ಒತ್ತಡ ತಾಳಲಾರದೆ ನಿಖಿತಾ ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಖಿತಾ ಅವರ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅವರು ಅನುಭವಿಸಿದ ಮಾನಸಿಕ ವೇದನೆ ಮತ್ತು ಕಿರುಕುಳದ ಬಗ್ಗೆ ವಿವರವಾಗಿ ಬರೆದಿದ್ದಾರೆ ಎನ್ನಲಾಗಿದೆ. ಮಗಳ ಸಾವಿಗೆ ಕಾರಣರಾದ ಸಹಪಾಠಿಗಳ ಹೆಸರನ್ನು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement