ವಿಜಯಪುರ : ಪ್ರವಾಸಕ್ಕೆ ಬಂದಿದ್ದ ಮೂವರು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ (Bhutnal Lake) ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಆರ್.ಟಿ ನಗರದಿಂದ 14 ಜನ ಕುಟುಂಬಸ್ಥರು ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿದ್ದರು. ಈ ವೇಳೆ ಭೂತನಾಳ ಕೆರೆ ವೀಕ್ಷಣೆಗೆ ಹೋಗಿದ್ದರು. ಬಾಲಕನೊಬ್ಬ ನೀರಿಗೆ ಇಳಿದು ಆಟವಾಡುವಾಗ ಮುಳುಗಿದ್ದಾನೆ. ಬಾಲಕನ ರಕ್ಷಣೆಗೆ ಇನ್ನಿಬ್ಬರು ನೀರಿಗೆ ಇಳಿದಿದ್ದಾರೆ. ಆದರೆ ಅವರು ಸಹ ಮುಳುಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಮೂವರಲ್ಲಿ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮಹಮ್ಮದ್ ಹಯಾತ್ (12), ಅಬ್ದುಲ್ ಖುದ್ದುಸ್ (35) ಹಾಗೂ ಹೈದರ್ ಪಾಶಾ (35) ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಆದರ್ಶ ನಗರ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ನಿಮ್ಮ ಕಾಮೆಂಟ್ ಬರೆಯಿರಿ