ಚಿಕ್ಕಮಗಳೂರು : ಮೃತಪಟ್ಟ ಪತಿಯ ಕೊಳೆತ ಶವದೊಂದಿಗೇ ಪತ್ನಿ 10 ದಿನಗಳ ಕಾಲ ಕಳೆದ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಣಕಲ್‌ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಮಾನಸಿಕ ಅಸ್ವಸ್ಥರಾಗಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಬಾಣಕಲ್ ನಿವಾಸಿ ಸಿರಿಲ್ ಮೋನಿಸ್ (77) ಮತ್ತು ಅವರ ಪತ್ನಿ ಸಿಸಿಲ್ (62) ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇವರ ಪುತ್ರ ಮೆಲ್ವಿನ್ ಬೆಂಗಳೂರಿನ ಗ್ಲಾಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪುತ್ರಿ ದುಬೈನಲ್ಲಿ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಸಿರಿಲ್ ಮೋನಿಸ್ ಅವರು ಪಾರ್ಶ್ವವಾಯು (Stroke) ಪೀಡಿತರಾಗಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತ ಅವರ ಪತ್ನಿ ಸಿಸಿಲ್ ಕಳೆದ ಮೂರು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು.
ಹತ್ತು ದಿನಗಳ ಹಿಂದೆಯಷ್ಟೇ ಪೋಷಕರನ್ನು ಭೇಟಿ ಮಾಡಿದ್ದ ಮೆಲ್ವಿನ್, ನಂತರ ಪ್ರತಿದಿನ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಪತ್ನಿಗೆ ತಮ್ಮ ಪತಿ ನಿಧನರಾಗಿದ್ದಾರೆಂದು ತಿಳಿದಿರಲಿಲ್ಲ ಮತ್ತು ಅವರ ದೇಹದ ಪಕ್ಕದಲ್ಲಿ ದಿನಗಟ್ಟಲೆ ಇದ್ದರು. ಸಿಸಿಲ್ ಮಗ ಫೋನ್ ಮಾಡಿದಾಗಲೆಲ್ಲ ಪ್ರತಿ ಬಾರಿಯೂ “ಮನೆಯಲ್ಲಿ ಎಲ್ಲವೂ ಸರಿಯಾಗಿದೆ” ಎಂದೇ ಉತ್ತರಿಸುತ್ತಿದ್ದರು.
ಬೆಳಕಿಗೆ ಬಂದಿದ್ದು ಹೇಗೆ?
ಏಪ್ರಿಲ್ 8ರಂದು ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಮೆಲ್ವಿನ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮೆಲ್ವಿನ್ ಅವರು ತಮ್ಮ ಸ್ನೇಹಿತರಿಗೆ ಮನೆಗೆ ಹೋಗಿ ನೋಡುವಂತೆ ತಿಳಿಸಿ, ತಾವು ಕೂಡ ಧಾವಿಸಿದ್ದಾರೆ.
ಮನೆಯೊಳಗೆ ಹೋದಾಗ ಸಿರಿಲ್ ಮೋನಿಸ್ ಅವರ ಶವ ಕೊಳೆತ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಆದರೆ ಸಿಸಿಲ್ ಅವರು, “ಪತಿ ಆರಾಮವಾಗಿದ್ದಾರೆ, ಶವವನ್ನು ಬಿಟ್ಟುಕೊಡುವುದಿಲ್ಲ” ಎಂದು ಹಠ ಹಿಡಿದಿದ್ದಾರೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಪತಿ ಮೃತಪಟ್ಟಿರುವುದು ಅವರಿಗೆ ಅರಿವಾಗಿಲ್ಲ ಎಂದು ತಿಳಿದುಬಂದಿದೆ.
ಸಾಮಾಜಿಕ ಕಾರ್ಯಕರ್ತ ಅರಿಫ್ ಅವರ ಸಹಾಯದೊಂದಿಗೆ, ಹುಳು ಹಿಡಿದಿದ್ದ ಶವವನ್ನು ಮನೆಯಿಂದ ಹೊರತೆಗೆಯಲಾಯಿತು. ಮೃತರ ಪುತ್ರ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಏಪ್ರಿಲ್ 8ರಂದು ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ