ಬೆಂಗಳೂರು : ಆರ್‌ಬಿಐನಲ್ಲೇ ₹2000 ನಕಲಿ ನೋಟು ಬದಲಿಸಲು ಯತ್ನ; ವ್ಯಕ್ತಿಯ ಬಂಧನ

ಬೆಂಗಳೂರು: ಭಾರತೀಯ ರಿಸರ್ವ ಬ್ಯಾಂಕ್ (RBI) ಕಚೇರಿಯಲ್ಲೇ ನಕಲಿ ನೋಟುಗಳನ್ನು ಅಸಲಿ ನೋಟುಗಳನ್ನಾಗಿ ಬದಲಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ನಾಗಶೆಟ್ಟಿಹಳ್ಳಿಯ ಎಸ್‌.ವಿ. ರಮೇಶ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಶಾಖೆಗೆ ₹2,000 ಮುಖಬೆಲೆಯ 375 ನೋಟುಗಳನ್ನು ಹಿಡಿದು ಬಂದಿದ್ದ. ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ನೆಪದಲ್ಲಿ ಈತ ಈ ಕೃತ್ಯಕ್ಕೆ ಮುಂದಾಗಿದ್ದ.
ಆದರೆ, ಬ್ಯಾಂಕ್ ಅಧಿಕಾರಿಗಳು ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಕ್ಷಣವೇ ಪತ್ತೆಹಚ್ಚಿದ್ದಾರೆ. ತಡಮಾಡದೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಅಂದಾಜು ₹7.50 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಲದ ಶಂಕೆ:
ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ ಕೆಲಸವಲ್ಲ, ಇದರ ಹಿಂದೆ ದೊಡ್ಡ ನಕಲಿ ನೋಟು ಜಾಲವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಈ ನಕಲಿ ನೋಟುಗಳ ಮೂಲ ಯಾವುದು? ಈ ದಂಧೆಯಲ್ಲಿ ಇನ್ನು ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕೇಂದ್ರ ಸರ್ಕಾರವು 2023ರ ಮೇ 19ರಂದು ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿತ್ತು. ಆದರೆ, ಸಾರ್ವಜನಿಕರಿಗೆ ಅನುಕೂಲವಾಗಲು ಆರ್‌ಬಿಐ ಕಚೇರಿಗಳಲ್ಲಿ ಇಂದಿಗೂ ನಿಗದಿತ ಮಿತಿಯೊಳಗೆ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಪ್ರಸ್ತುತ ಒಬ್ಬ ವ್ಯಕ್ತಿಯು ಒಂದು ಬಾರಿಗೆ ಗರಿಷ್ಠ ₹20,000 ವರೆಗಿನ ₹2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಯು, ತನ್ನ ಬಳಿಯಿದ್ದ ನಕಲಿ ನೋಟುಗಳನ್ನು ಅಸಲಿ ನೋಟುಗಳಾಗಿ ಪರಿವರ್ತಿಸಲು ಯತ್ನಿಸಿದ್ದಾನೆ. ಪೊಲೀಸರು ಈ ವಂಚನೆಯ ಜಾಲದ ಮೂಲವನ್ನು ಪತ್ತೆಹಚ್ಚುತ್ತಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement