ಬೆಂಗಳೂರು : ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಬುಧವಾರ ನಿರ್ದೇಶನ ನೀಡಿದೆ.
ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೊಟೇಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ. ಅಸಂಘಟಿತ ವಲಯ ಸೇರಿ ಎಲ್ಲಾ ವಲಯಗಳಲ್ಲೂ ಸರ್ಕಾರವು ತನ್ನ ನೀತಿ ಜಾರಿಗೊಳಿಸುವುದನ್ನು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಮಹಿಳೆ ಮತ್ತು ಪುರುಷ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕ ಅನುಭವಗಳು ಅವರನ್ನು ಪ್ರತ್ಯೇಕಿಸುತ್ತವೆ. “ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು; ಆದರೂ, ಅವರು ಜೈವಿಕವಾಗಿ ಭಿನ್ನರು.ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು, ಹೀಗಾಗಿ, ಮುಟ್ಟಿನ ರಜೆಯ ಮನವಿಯು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರೆಯ ಪರವಾಗಿ ದೀಕ್ಷಾ ಅಮೃತೇಶ ವಾದಿಸಿದ್ದರು. ರಾಜ್ಯ ಸರ್ಕಾರದ ಋತುಚಕ್ರ ರಜೆ ನೀತಿ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ