
ಕಾರವಾರ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದ ವ್ಯಾಪ್ತಿಯಲ್ಲಿ ನಡೆದಿದ್ದು, ಭಟ್ಕಳದಿಂದ ಕುಮಟಾ ಕಡೆಗೆ ಹೋಗುವ ಬಸ್ ಮುರ್ಡೇಶ್ವರದ ನಾಕಾದಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದಾಗ ಕೆಳಭಾಗದಿಂದ ಹಠಾತ್ತನೆ ಜ್ವಾಲೆಗಳು ಹೊರಬರಲಾರಂಭಿಸಿದವು ಎಂದು ಹೇಳಲಾಗಿದೆ.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ ಪ್ರಯಾಣಿರಿಗೆ ತಕ್ಷಣವೇ ಕಳೆಗೆ ಇಳಿಯುವಂತೆ ತಿಳಿಸಿದ್ದಾನೆ ಎನ್ನಲಾಗಿದೆ. ಪ್ರಯಾಣಿಕರು ತಕ್ಷಣವೇ ಬಸ್ಸಿನಿಂದ ಕೆಳಗಿಳಿದಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಬೆಂಕಿ ನಂದಿಸಲು ಸ್ಥಳೀಯ ಆಟೋ ಚಾಲಕರು ಮತ್ತು ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ನೆರವಾದರು. ಬೆಂಕಿ ಮತ್ತಷ್ಟು ವ್ಯಾಪಿಸುವ ಮುನ್ನವೇ ಅದನ್ನು ಹತೋಟಿಗೆ ತರುವಲ್ಲಿ ಸ್ಥಳೀಯರು ಯಶಸ್ವಿಯಾದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಿದರು. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನು ಎಂಬ ಬಗ್ಗೆ ಅಧಿಕಾರಿಗಳು ಈಗ ತನಿಖೆ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ