ಶ್ರೀನಗರ: ಛಲವೊಂದಿದ್ದರೆ ದೈಹಿಕ ನ್ಯೂನತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಾಲಕಿ ಜೈನಬ್ ಬಿಲಾಲ್ ಸಾಬೀತುಪಡಿಸಿದ್ದಾರೆ. ದೃಷ್ಟಿಹೀನತೆಯ ನಡುವೆಯೂ ಅದ್ಭುತ ಸಾಧನೆ ಮಾಡಿರುವ ಜೈನಬ್ 2026ರ ಸಿಬಿಎಸ್‌ಇ (CBSE) 10ನೇ ತರಗತಿ ಪರೀಕ್ಷೆಯಲ್ಲಿ ಈಕೆ ಶೇ. 95ರಷ್ಟು ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಒಟ್ಟು 500 ಅಂಕಗಳಲ್ಲಿ 475 ಅಂಕಗಳನ್ನು ಗಳಿಸಿರುವ ಜೈನಬ್ , ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಸಹಾಯಕರಿಲ್ಲದೆ ಲ್ಯಾಪ್‌ಟಾಪ್ ಮೂಲಕ ಪರೀಕ್ಷೆ
ಜೈನಬ್ ಅವರ ಈ ಯಶಸ್ಸು ಕೇವಲ ಅಂಕಗಳಿಗೆ ಸೀಮಿತವಾಗಿಲ್ಲ. ಇವರು ಪರೀಕ್ಷೆ ಬರೆದ ರೀತಿ ಅತ್ಯಂತ ವಿಶೇಷವಾದುದು. ಸಾಮಾನ್ಯವಾಗಿ ದೃಷ್ಟಿ ಇಲ್ಲದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮತ್ತೊಬ್ಬರ (Scribe) ಸಹಾಯ ಪಡೆಯುತ್ತಾರೆ. ಆದರೆ, ಜೈನಬ್ ಯಾವುದೇ ಸಹಾಯಕರನ್ನು ಅವಲಂಬಿಸದೆ, ಲ್ಯಾಪ್‌ಟಾಪ್ ಬಳಸಿ ಪರೀಕ್ಷೆ ಬರೆದ ದೇಶದ ಮೊದಲ ದೃಷ್ಟಿಹೀನ ವಿಕಲಚೇತನ ವಿದ್ಯಾರ್ಥಿಯಾಗಿದ್ದಾರೆ.
ಐಟಿ ಕ್ಷೇತ್ರದಲ್ಲಿ ಸಾಧನೆಯ ಕನಸು
ಶ್ರೀನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ (DPS) ವಿದ್ಯಾರ್ಥಿನಿಯಾದ ಜೈನಬ್ ಅವರಿಗೆ ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬೇಕೆಂಬ ಆಸೆಯಿದೆ. ತಮ್ಮ ಈ ಯಶಸ್ಸಿಗೆ ಪೋಷಕರ ಅಚಲ ಬೆಂಬಲ ಮತ್ತು ಶಾಲಾ ಶಿಕ್ಷಕರ ಮಾರ್ಗದರ್ಶನವೇ ಕಾರಣ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಜೈನಬ್ ಕೇವಲ ಓದಿನಲ್ಲಿ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ತಮ್ಮ 12ನೇ ವಯಸ್ಸಿನಲ್ಲೇ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಸಂದರ್ಶಿಸುವ ಮೂಲಕ ತಮ್ಮ ಸಂವಹನ ಕೌಶಲವನ್ನು ಸಾಬೀತುಪಡಿಸಿದ್ದರು.
ಇದೇ ಶಾಲೆಯ ಮತ್ತೊಬ್ಬ ವಿಶೇಷ ಚೇತನ ವಿದ್ಯಾರ್ಥಿ ಫಾರೀಸ್ ರಫೀಕ್ ಕೂಡ ಶೇ. 92.6ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಶಾಲೆಯ ಒಳಗೊಳ್ಳುವಿಕೆಯ ಶಿಕ್ಷಣ ನೀತಿ (Inclusive Education) ಇವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ