ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದ ನಾಲ್ವರು “ಕಟ್ಟರ್ ಪಂಥೀಯ” ವ್ಯಕ್ತಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ.
ದೆಹಲಿ ಪೊಲೀಸ್‌ನ ವಿಶೇಷ ದಳ (Special Cell) ಈ ಕಾರ್ಯಾಚರಣೆಯನ್ನು ನಡೆಸಿದ್ದು, ಬಂಧಿತರನ್ನು ಮೊಸೈಬ್ ಅಹ್ಮದ್, ಮೊಹಮ್ಮದ್ ಹಮ್ಮದ್, ಮೊಹಮ್ಮದ್ ಸೊಹೈಲ್ ಮತ್ತು ಶೇಖ್ ಇಮ್ರಾನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐಇಡಿ (IED) ಸ್ಫೋಟಕ ಮತ್ತು ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಇಬ್ಬರು ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ ಆಟಿಕೆ ಕಾರಿಗೆ ಸ್ಫೋಟಕ ಅಳವಡಿಸಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಆರೋಪಿಗಳು ದೇಶದ ಪ್ರಮುಖ ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದರು.

ಆರೋಪಿಗಳಲ್ಲಿ ಒಬ್ಬ ಡಿಸೆಂಬರ್ 2025 ರಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮತ್ತು ಕೆಂಪು ಕೋಟೆ ಮತ್ತು ಇಂಡಿಯಾ ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳ ವಿಚಕ್ಷಣ ನಡೆಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಅಯೋಧ್ಯೆಯ ರಾಮ ಮಂದಿರ, ಸಂಸತ್‌ ಭವನ ಮತ್ತು ಕೆಲವು ಮಿಲಿಟರಿ ನೆಲೆಗಳಂತಹ ಸ್ಥಳಗಳ ಮೇಲೆ ಸಂಭಾವ್ಯ ದಾಳಿಗಳ ಬಗ್ಗೆ ಮಾಡ್ಯೂಲ್ ಚರ್ಚಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ತಂಡವು ಗೂಢಲಿಪೀಕರಿಸಿದ (Encrypted) ಸೋಷಿಯಲ್ ಮೀಡಿಯಾ ಗ್ರೂಪ್‌ಗಳ ಮೂಲಕ ಸಕ್ರಿಯವಾಗಿತ್ತು. “ಘಜ್ವಾ-ಎ-ಹಿಂದ್” ನಂತಹ ಉಗ್ರಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾ, ಹೊಸಬರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಯತ್ನಿಸುತ್ತಿತ್ತು. ಒಬ್ಬ ಆರೋಪಿಯು ಕೆಂಪು ಕೋಟೆಯ ಮೇಲೆ ಕಪ್ಪು ಬಾವುಟವಿರುವ ಎಡಿಟ್ ಮಾಡಿದ ಫೋಟೋವನ್ನು ಹಂಚಿಕೊಂಡು ಪ್ರಚೋದನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ವಿದೇಶಿ ಸಂಪರ್ಕ ಮತ್ತು ಹಿನ್ನೆಲೆ
ಬಂಧಿತರ ಪೈಕಿ ಮೊಸೈಬ್ ಅಹ್ಮದ್ ಹಿಂದೆ ಗಲ್ಫ್ ರಾಷ್ಟ್ರಗಳಲ್ಲಿ ಆಟೋ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿದ್ದ. ತನ್ನ ತಾಂತ್ರಿಕ ಜ್ಞಾನವನ್ನು ಬಳಸಿ ರಿಮೋಟ್ ಕಂಟ್ರೋಲ್ ಸ್ಫೋಟಕಗಳನ್ನು ತಯಾರಿಸುತ್ತಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಇವರ ಹಿಂದೆ ಇರುವ ಹ್ಯಾಂಡ್ಲರ್‌ಗಳು ಮತ್ತು ನೆಟ್‌ವರ್ಕ್ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement