ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಸೇರಿ 17 ಕಡೆ ಇ.ಡಿ. ದಾಳಿ

ಬೆಂಗಳೂರು:  ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌ ಅವರಿಗೆ ಇ.ಡಿ (E.D) ಶಾಕ್ ನೀಡಿದ್ದು, ಅವರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಹ್ಯಾರಿಸ್ ಅವರ ಮನೆ ಸೇರಿದಂತೆ 17 ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
 ಕುಖ್ಯಾತ ಕ್ರಿಪ್ಟೋ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ನಡೆದಿದೆ. ಕಾನೂನುಬಾಹಿರ ಕ್ರಿಪ್ಟೋ ವಹಿವಾಟಿನ ಮೂಲಕ ಬಂದ ಹಣವನ್ನು ಕಾನೂನುಬದ್ಧಗೊಳಿಸಿರುವ (ಮನಿ ಲಾಂಡರಿಂಗ್) ಶಂಕೆಯ ಮೇಲೆ ಈ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಏನಿದು ಪ್ರಕರಣ?
ಈ ಇಡೀ ಪ್ರಕರಣದ ಮೂಲ 2017ರ ಹ್ಯಾಕಿಂಗ್ ಘಟನೆಗಳಲ್ಲಿದೆ. ಶ್ರೀಕಿ ಮತ್ತು ಆತನ ಸಹಚರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್‌ಗಳನ್ನು ಕಳ್ಳತನ ಮಾಡಿದ್ದರು ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಇಡಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.
 ದುಬೈ ಮೂಲದ ಕ್ರಿಪ್ಟೋ ಎಕ್ಸ್ಚೇಂಜ್‌ನಿಂದ ಹ್ಯಾಕ್ ಮಾಡಲಾದ ಬಿಟ್‌ಕಾಯಿನ್‌ಗಳ ವರ್ಗಾವಣೆ ಸಂಬಂಧಿಸಿದಂತೆ ಇ.ಡಿ. ತನಿಖೆ ನಡೆಸುತ್ತಿದೆ.  ಈ ಡಿಜಿಟಲ್ ಹಣದ ಜಾಡನ್ನು ಹಿಡಿದು ಇಡಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
 ಈ ಹಿಂದೆ ಈ ಪ್ರಕರಣದ ತನಿಖೆಯನ್ನು ಸಿಸಿಬಿ (CCB) ಮತ್ತು ಸಿಐಡಿ (CID) ನಡೆಸಿದ್ದವು.  ಶ್ರೀಕಿ ಬಂಧನದೊಂದಿಗೆ ಪ್ರಕರಣ ತಣ್ಣಗಾಗಿದ್ದರೂ, ಇದೀಗ ಮತ್ತೆ ಇ.ಡಿ ದಾಳಿ ನಡೆಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕೆಲವು ರಾಜಕೀಯ ಮುಖಂಡರ ಹೆಸರುಗಳು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ತನಿಖೆ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement