ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಏಪ್ರಿಲ್ 23 ರ ಕೋಲ್ಕತ್ತಾ ಭೇಟಿ ರದ್ದಾಗಿದೆ. ಸ್ಥಳೀಯ ಆಡಳಿತವು ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮೂಲಗಳು ಮಂಗಳವಾರ ತಿಳಿಸಿವೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮತ್ತು ಎಡರಂಗದ ಮೈತ್ರಿಕೂಟದ ಪರವಾಗಿ ಚುನಾವಣಾ ಪ್ರಚಾರದ ನೇತೃತ್ವ ವಹಿಸಲು ರಾಜಧಾನಿಗೆ ಬರಬೇಕಿತ್ತು. ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಮತ್ತು ಸ್ಥಳೀಯ ಆಡಳಿತವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಮಂಗಳವಾರ ಸಂಜೆ 6 ಗಂಟೆಯವರೆಗೂ ಕಾಂಗ್ರೆಸ್ ಪಕ್ಷವು ಅನುಮತಿಗಾಗಿ ಕಾಯುತ್ತಿತ್ತು. ಆದರೆ ಅನುಮತಿ ಸಿಗದ ಕಾರಣ, ಏಪ್ರಿಲ್ 23ರ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್ ಏಪ್ರಿಲ್ 25 ಅಥವಾ 26 ರಂದು ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು, ಹೊಸದಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಟಿಎಂಸ ಸ್ಪಷ್ಟನೆ ಮತ್ತು ಚುನಾವಣಾ ಆಯೋಗದ ನಿಯಮ
ಈ ಆರೋಪಗಳನ್ನು ತಳ್ಳಿಹಾಕಿರುವ ಪಶ್ಚಿಮ ಬಂಗಾಳ ಸಚಿವೆ ಶಶಿ ಪಂಜಾ, ಯಾವುದೇ ರಾಜಕೀಯ ಸಭೆಗಳಿಗೆ ಅನುಮತಿ ಪಡೆಯಲು ‘ಸುವಿಧಾ ಪೋರ್ಟಲ್’ ಮೂಲಕ ಕನಿಷ್ಠ 2 ರಿಂದ 7 ದಿನಗಳ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. “ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುವ ಸಾಮಾನ್ಯ ನಿಯಮ. ಈಗ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ, ಅನುಮತಿ ರದ್ದತಿಯ ಬಗ್ಗೆ ಚುನಾವಣಾ ಆಯೋಗವೇ ಉತ್ತರಿಸಬೇಕು, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣಾ ಕಣ
ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 152 ಕ್ಷೇತ್ರಗಳು ಹಾಗೂ
ಎರಡನೇ ಹಂತದಲ್ಲಿ 142 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.
ತ್ರಿಕೋನ ಸ್ಪರ್ಧೆಯ ನಿರೀಕ್ಷೆ:
2021ರ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಎಡರಂಗದ ಜೊತೆಗೂಡಿ ಅಖಾಡಕ್ಕಿಳಿದಿರುವ ಕಾಂಗ್ರೆಸ್, ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯನ್ನು ‘ತ್ರಿಕೋನ ಸ್ಪರ್ಧೆ’ಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಟಿಎಂಸಿ ಹೋರಾಡುತ್ತಿದ್ದರೆ, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ