ಬೆಂಗಳೂರು: ಪ್ರೀತಿಯಲ್ಲಿ ಉಂಟಾದ ವೈಮನಸ್ಸು ಮತ್ತು ನಿರ್ಲಕ್ಷ್ಯದ ಸೇಡು ನಗರದಲ್ಲಿ ಘೋರ ಹತ್ಯೆಯೊಂದಕ್ಕೆ ಸಾಕ್ಷಿಯಾಗಿದೆ. ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಕೋಪದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಹೊಸ ಮಾದರಿಯ ‘ಪ್ರಪೋಸ್’ ಮಾಡುವ ಆಮಿಷವೊಡ್ಡಿ, ಆತನನ್ನು ಕುರ್ಚಿಗೆ ಕಟ್ಟಿ ಹಾಕಿ ಜೀವಂತವಾಗಿ ಸುಟ್ಟು ಕೊಂದಿರುವ ಅಮಾನವೀಯ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಿರಣ (27) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರೇರಣಾ (27) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ನಗರದ ಟೆಲಿಕಾಂ ಸ್ಟೋರ್ ಒಂದರಲ್ಲಿ ಸಹೋದ್ಯೋಗಿಗಳಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರ ನಡುವೆ ಇತ್ತೀಚೆಗೆ ಬಿರುಕು ಮೂಡಿತ್ತು. ಕಿರಣ ತನ್ನನ್ನು ಸರಿಯಾಗಿ ಗಮನಿಸುತ್ತಿಲ್ಲ ಮತ್ತು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರೇರಣಾ ತೀವ್ರವಾಗಿ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ.
ಸಂಚು ರೂಪಿಸಿ ಹತ್ಯೆ:
ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪ್ರೇರಣಾ ದಕ್ಷಿಣ ಬೆಂಗಳೂರಿನ ಅಂಜನಾಪುರದಲ್ಲಿರುವ ತನ್ನ ಮನೆಗೆ ಕಿರಣ ಅವರನ್ನು ಕರೆಸಿಕೊಂಡಿದ್ದಾಳೆ. ವಿದೇಶಗಳಲ್ಲಿ ಮಾಡುವಂತೆ ನಿನಗೆ ವಿಶೇಷವಾಗಿ ಪ್ರಪೋಸ್ ಮಾಡುತ್ತೇನೆ ಎಂದು ನಂಬಿಸಿ, ಕಿರಣ ಅವರ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ನಂತರ ಆತನನ್ನು ಕುರ್ಚಿಯ ಮೇಲೆ ಕೂರಿಸಿ ಕೈಕಾಲುಗಳನ್ನು ಗಟ್ಟಿಯಾಗಿ ಕಟ್ಟಿ ಹಾಕಿದ್ದಾಳೆ. ಕಿರಣ ಇದನ್ನು ವಿರೋಧಿಸಿದಾಗ, ಇದು ಸರ್‌ಪ್ರೈಸ್‌ನ ಭಾಗ ಎಂದು ನಂಬಿಸಿದ್ದಾಳೆ. ಕಿರಣ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾಗ, ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಸೀಮೆಎಣ್ಣೆಯನ್ನು ಆತನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಅಷ್ಟೇ ಅಲ್ಲದೆ, ಪ್ರಿಯಕರ ಬೆಂಕಿಯಲ್ಲಿ ಬೆಂದು ಮೃತಪಡುತ್ತಿದ್ದ ದೃಶ್ಯವನ್ನು ಈಕೆ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ, “ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕಿರಣ ತನ್ನನ್ನು ಕಡೆಗಣಿಸುತ್ತಿದ್ದಾನೆ ಎಂಬ ಹತಾಶೆಯಿಂದ ಈ ಕೃತ್ಯವೆಸಗಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಘಟನೆ ಬೆಂಗಳೂರಿನಲ್ಲಿ ಆಘಾತ ಮೂಡಿಸಿದ್ದು, ಪ್ರೀತಿಯ ಹೆಸರಿನಲ್ಲಿ ನಡೆದ ಈ ಪೈಶಾಚಿಕ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ


ನಿಮ್ಮ ಕಾಮೆಂಟ್ ಬರೆಯಿರಿ