ಬೆಂಗಳೂರು : ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಪ್ರಕರಣ ; ಕಾಲೇಜಿನ ಮೂವರು ಅಮಾನತು

ಬೆಂಗಳೂರು: ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪತ್ರ ಬರೆದಿತ್ತು. ವಸ್ತ್ರಸಂಹಿತೆ ಅಧಿಕಾರಿಗಳ ನೇಮಕ ಮಾಡಿದರೂ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸಲು ವಸ್ತ್ರಸಂಹಿತೆಯಲ್ಲಿ ಸೂಚನೆ ನೀಡಿಲ್ಲ. ಆದರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಕೇನ ಕೆಇಎ ಸೂಚಿಸಿತ್ತು. ಇದರ ಬೆನ್ನಲ್ಲೇ ಸಿಬ್ಬಂದಿಯಾದ ಸುಧಾಕರ, ಗಿರಿಜಮ್ಮ, ಆರ್​.ಸರಿತಾ ಎಂಬವರನ್ನು ಕೃಪಾನಿಧಿ ಕಾಲೇಜು ಅಮಾನತು ಮಾಡಿದೆ.

ಏಪ್ರಿಲ್​​ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆ ಬರೆಯಲು ಬಂದಿದ್ದ ಆನಂದ ಸುಧೀರ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ನೆಪದಲ್ಲಿ ತಡೆದ ಸಿಬ್ಬಂದಿ, ಅವರ ಜನಿವಾರ ತೆಗೆಸಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ವಿದ್ಯಾರ್ಥಿಗಳು ಆಕ್ಷೇಪಿಸಿದಾಗ, ‘ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರದಿಂದ ಹೊರಹೋಗಿ’ ಎಂದು ತಾಕೀತು ಮಾಡಿದ್ದರು. ಕೊನೆಗೆ ಪೋಷಕರು ಅನಿವಾರ್ಯವಾಗಿ ಜನಿವಾರವನ್ನು ತೆಗೆಸಿ ಮಗನನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಮತ್ತು ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement