ಕೋಲ್ಕತ್ತಾ: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನದ ವೇಳೆ ಹೈವೋಲ್ಟೇಜ್ ಕ್ಷೇತ್ರವಾದ ಡೈಮಂಡ್ ಹಾರ್ಬರ್ ವ್ಯಾಪ್ತಿಯ ಫಾಲ್ತಾ ವಿಧಾನಸಭಾ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎವಿಎಂ ಯಂತ್ರದ ಬಿಜೆಪಿಗೆ ಮತ ಒತ್ತುವ ಬಟನ್ ಮೇಲೆ ಟೇಪ್ ಹಚ್ಚಿ ಮತದಾನಕ್ಕೆ ಅಡ್ಡಿಪಡಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಕೆಲವು ಬೂತ್‌ಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಸಂಸದ ಅಭಿಷೇಕ ಬ್ಯಾನರ್ಜಿ ಅವರ ಭದ್ರಕೋಟೆ ಎನಿಸಿರುವ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ.
ಇವಿಎಂ (EVM) ಯಂತ್ರಗಳಲ್ಲಿ ಬಿಜೆಪಿಯ ‘ಕಮಲ’ ಚಿಹ್ನೆಯ ಮುಂದಿರುವ ಬಟನ್ ಮೇಲೆ ಟೇಪ್ ಅಂಟಿಸಲಾಗಿದೆ. ಇದರಿಂದ ಮತದಾರರು ಬಿಜೆಪಿಗೆ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಇದು ಅಭಿಷೇಕ ಬ್ಯಾನರ್ಜಿ ಅವರ “ಡೈಮಂಡ್ ಹಾರ್ಬರ್ ಮಾಡೆಲ್” ಅಕ್ರಮ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಿಡಿಕಾರಿದ್ದಾರೆ. ಹರಿಂದಂಗ ಹೈಸ್ಕೂಲ್ ಬೂತ್‌ನಲ್ಲಿ ಇವಿಎಂನ ಮೂರನೇ ಬಟನ್‌ಗೆ ಟೇಪ್ ಹಚ್ಚಿರುವ ವಿಡಿಯೋವನ್ನು ಮಾಳವೀಯ ಹಂಚಿಕೊಂಡಿದ್ದು, ಬಾಧಿತ ಬೂತ್‌ಗಳಲ್ಲಿ ಮರುಮತದಾನಕ್ಕೆ ಒತ್ತಾಯಿಸಿದ್ದಾರೆ.
ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿರುವ ಟಿಎಂಸಿ ವಕ್ತಾರ ರಿಜು ದತ್ತಾ, “ಬಂಗಾಳದಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.
“ಚುನಾವಣಾ ಪ್ರಕ್ರಿಯೆ ಆಯೋಗದ ಅಡಿಯಲ್ಲಿ ಬರುತ್ತದೆ. ಒಂದು ವೇಳೆ ಇವಿಎಂ ಅಕ್ರಮ ನಡೆದಿದ್ದರೆ ಅದಕ್ಕೆ ಆಯೋಗ ಮತ್ತು ಭದ್ರತಾ ವೀಕ್ಷಕರೇ ಹೊಣೆ. ಬಿಜೆಪಿ ಕೇವಲ ಟ್ವೀಟ್ ಮಾಡುವ ಬದಲು ಚುನಾವಣಾ ಆಯೋಗಕ್ಕೆ ದೂರು ನೀಡಲಿ,” ಎಂದು ದತ್ತಾ ಸವಾಲು ಹಾಕಿದ್ದಾರೆ.
ಚುನಾವಣಾ ಆಯೋಗದ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, ದೂರು ಬಂದಿರುವ ಬೂತ್‌ಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅಕ್ರಮ ನಡೆದಿರುವುದು ದೃಢಪಟ್ಟರೆ ಆ ಬೂತ್‌ಗಳಲ್ಲಿ ಮರುಮತದಾನ (Repolling) ನಡೆಸಲಾಗುವುದು ಎಂದು ತಿಳಿಸಿವೆ.
ಇದೇ ವೇಳೆ, ಕೇಂದ್ರ ಪಡೆಗಳು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿವೆ ಮತ್ತು ಹೊರರಾಜ್ಯದ ವೀಕ್ಷಕರನ್ನು ಕರೆತಂದು ಮತದಾರರಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ