ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತು ಅನಿಶ್ಚಿತತೆ ಮುಂದುವರಿಯುತ್ತಿರುವ ಬೆನ್ನಲ್ಲೇ, ರಾಜಕೀಯ ಬೆಳವಣಿಗೆಗಳು ನಾಟಕೀಯ ತಿರುವು ಪಡೆದುಕೊಂಡಿವೆ. ಎಎಂಎಂಕೆ (AMMK) ಪಕ್ಷದ ಮುಖ್ಯಸ್ಥ ಟಿ.ಟಿ.ವಿ ದಿನಕರನ್ ಅವರು ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ, ಎಡಪ್ಪಾಡಿ ಪಳನಿಸ್ವಾಮಿ (EPS) ಅವರಿಗೆ 120 ಶಾಸಕರ ಬೆಂಬಲವಿದ್ದು, ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪತ್ರ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ನಟ ವಿಜಯ ನೇತೃತ್ವದ ಟಿವಿ ಕೆ (TVK) ಪಕ್ಷದ ವಿರುದ್ಧ ದಿನಕರನ್ ಕುದುರೆ ವ್ಯಾಪಾರದ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷದ ಏಕೈಕ ಶಾಸಕ ಕಾಮರಾಜ್ ಎಸ್. ಅವರು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿದ ಅವರು, ಶಾಸಕರು ಪಕ್ಷಾಂತರ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶಾಸಕ ಕಾಮರಾಜ ಅವರು ಇಪಿಎಸ್ ಪರವಾಗಿ ಬೆಂಬಲ ಸೂಚಿಸಿ ಸಹಿ ಮಾಡಿದ್ದ ಪತ್ರವನ್ನು ತಾವು ರಾಜ್ಯಪಾಲರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ ದಿನಕರನ್, ಟಿವಿಯಲ್ಲಿ ತಮ್ಮ ಪಕ್ಷ ವಿಜಯ ಅವರನ್ನು ಬೆಂಬಲಿಸುತ್ತಿದೆ ಎಂಬ ಸುದ್ದಿ ನೋಡಿ ಆಘಾತವಾಯಿತು ಎಂದಿದ್ದಾರೆ.
“ನನ್ನ ಶಾಸಕ ಸಂಜೆ 6:30ರ ಸುಮಾರಿಗೆ ಇಪಿಎಸ್ ಪರವಾಗಿ ಪತ್ರಕ್ಕೆ ಸಹಿ ಹಾಕಿ ನನ್ನ ಕಾರ್ಯದರ್ಶಿ ಮೂಲಕ ಕಳುಹಿಸಿಕೊಟ್ಟಿದ್ದರು. ಆದರೆ ವಿಜಯ ಅವರ ಬಳಿ ಇರುವುದು ನಕಲಿ ಪತ್ರ ಇರಬಹುದು ಅಥವಾ ಇದು ಕುದುರೆ ವ್ಯಾಪಾರ ಇರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ,” ಎಂದು ದಿನಕರನ್ ಹೇಳಿದ್ದಾರೆ. ಅಲ್ಲದೆ, “ವಿಪಕ್ಷದ ಶಾಸಕರ ಬೆಂಬಲ ಪಡೆಯುತ್ತಿರುವ ವಿಜಯ ಅವರು ಹೇಗೆ ತಾನು ಸ್ವಚ್ಛ ರಾಜಕಾರಣಿ ಎಂದು ಹೇಳಿಕೊಳ್ಳುತ್ತಾರೆ? ಇಂತಹವರಿಂದ ಸ್ವಚ್ಛ ಮತ್ತು ಉತ್ತಮ ಆಡಳಿತ ನೀಡಲು ಸಾಧ್ಯವೇ? ಪಳನಿಸ್ವಾಮಿ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ,” ಎಂದು ಅವರು ಹೇಳಿದ್ದಾರೆ.
ದಿನಕರನ್ ಅವರ ಈ ಹೊಸ ಆರೋಪ ಮತ್ತು ರಾಜ್ಯಪಾಲರಿಗೆ ನೀಡಿರುವ ದೂರು ಈಗ ತಮಿಳುನಾಡು ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.
ಮತ್ತೊಂದೆಡೆ, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನು ಮೂರನೇ ಬಾರಿಗೆ ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ (fractured mandate), ವಿಜಯ ಅವರು ಇತರ ಪಕ್ಷಗಳ ಬೆಂಬಲ ಕ್ರೋಢೀಕರಿಸಿದ್ದಾರೆ.
234 ಸದಸ್ಯರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿ ಕೆ, ಬಹುಮತಕ್ಕೆ ಬೇಕಾದ 118ರ ಸಂಖ್ಯೆಯನ್ನು ತಲುಪಲು ಕಾಂಗ್ರೆಸ್ (5), ಸಿಪಿಐ (2), ಸಿಪಿಐ(ಎಂ) (2) ಮತ್ತು ವಿಸಿಕೆ (2) ಪಕ್ಷಗಳ ಬೆಂಬಲ ಪಡೆದಿದೆ. ಸಿಪಿಐ(ಎಂ) ಅಧಿಕೃತವಾಗಿ ಬೆಂಬಲ ಪತ್ರ ನೀಡಿದ್ದರೆ, ಸಿಪಿಐ ಪಕ್ಷವು “ಸ್ಥಿರ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಆಡಳಿತ”ಕ್ಕಾಗಿ ಷರತ್ತುಬದ್ಧ ಬೆಂಬಲ ನೀಡುವುದಾಗಿ ಘೋಷಿಸಿದೆ. ಈ ಎಲ್ಲಾ ಪಕ್ಷಗಳ ಬೆಂಬಲದೊಂದಿಗೆ ವಿಜಯ ಅವರ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ. ಆದರೆ ಟಿವಿಕೆ ಪಕ್ಷದ ವಿಜಯ ಅವರು ಎರಡು ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದರಿಂದ ಒಂದು ಕ್ಷೇತ್ರವನ್ನು ಬಿಡಬೇಕಾಗುತ್ತದೆ. ಹೀಗಾದರೆ ಸಂಖ್ಯಾ ಬಲ 117 ಆಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ