ಕರ್ನಾಟಕದಲ್ಲಿ ಹೊಸದಾಗಿ 1243 ಹೊಸ ಇವಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ : ಎಚ್‌.ಡಿ. ಕುಮಾರಸ್ವಾಮಿ ಘೋಷಣೆ

ಬೆಂಗಳೂರು: ದೇಶದ ಆಟೋಮೊಬೈಲ್ ವಲಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸಲು ಮತ್ತು ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಒಟ್ಟು ₹503.86 ಕೋಟಿ ಮೌಲ್ಯದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ₹123.26 ಕೋಟಿ ಹಂಚಿಕೆಯಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪಿಎಂ ಇ-ಡ್ರೈವ್ (PM E-DRIVE)’ ಯೋಜನೆಯಡಿ ದೇಶಾದ್ಯಂತ ಇವಿ ಚಾರ್ಜಿಂಗ್ ಮೂಲಸೌಕರ್ಯ ಸಬಲೀಕರಣ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಒಟ್ಟು 1,243 ಇವಿ ಚಾರ್ಜರ್‌ಗಳನ್ನು ಸ್ಥಾಪಿಸಲು ₹123.26 ಕೋಟಿ ವೆಚ್ಚದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಂತದಲ್ಲಿ ಈಗಾಗಲೇ ₹20 ಕೋಟಿ ಬಿಡುಗಡೆ ಮಾಡಲಾಗಿದೆ.
ಒಟ್ಟು ₹503.86 ಕೋಟಿ ವೆಚ್ಚದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ (CPSUs) 4,874 ಇವಿ ಚಾರ್ಜರ್‌ಗಳನ್ನು ಅಳವಡಿಸಲಾಗುತ್ತದೆ ಎಂದರು.  ರಾಜಸ್ಥಾನ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಈ ಯೋಜನೆಯ ಲಾಭ ಪಡೆಯಲಿವೆ. ಇದರೊಂದಿಗೆ ಎಚ್‌ಪಿಸಿಎಲ್‌ (HPCL), ಐಒಸಿಎಲ್‌ (IOCL) ಮತ್ತು ಬಿಪಿಸಿಎಲ್‌ (BPCL)ನಂತಹ ಪ್ರಮುಖ ತೈಲ ಕಂಪನಿಗಳೂ ಇದರಲ್ಲಿ ಭಾಗಿಯಾಗಿವೆ.

ಇವಿ ವಲಯದ ಬಲವರ್ಧನೆಗೆ ವಿವಿಧ ಯೋಜನೆಗಳು:
ಸಚಿವರು ತಮ್ಮ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಪ್ರೋತ್ಸಾಹಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
₹18,100 ಕೋಟಿ ವೆಚ್ಚದ ಪಿಎಲ್‌ಐ ಎಸಿಸಿ (PLI ACC) ಯೋಜನೆಯು ಬ್ಯಾಟರಿ ಸೆಲ್ ಉತ್ಪಾದನೆಯನ್ನು ಉತ್ತೇಜಿಸಲಿದೆ. ₹25,938 ಕೋಟಿ ವೆಚ್ಚದ ಪಿಎಲ್‌ಐ ಆಟೋ ಯೋಜನೆಯು ಹೈಡ್ರೋಜನ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳ ತಯಾರಿಕೆಗೆ ಬೆಂಬಲ ನೀಡಲಿದೆ. ಹಾಗೂ ₹7,280 ಕೋಟಿ ವೆಚ್ಚದ ಆರ್‌ಇ ಪಿಎಂ (RE PM) ಯೋಜನೆಯು ಅಪರೂಪದ ಭೂಮಿಯ ಅಯಸ್ಕಾಂತಗಳ (Rare Earth Magnets) ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
₹10,900 ಕೋಟಿ ವೆಚ್ಚದ ಪಿಎಂ ಇ ಡ್ರೈವ್‌ (PM E-Drive) ಯೋಜನೆಯು ಇಡೀ ಇವಿ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿದೆ. ಇದರಲ್ಲಿ ಈ ಯೋಜನೆಯಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳಿಗಾಗಿಯೇ ₹2,000 ಕೋಟಿ ಮೀಸಲಿಡಲಾಗಿದೆ ಎಂದರು.

‘ಯುಬಿಸಿ’ ಆ್ಯಪ್: ಇವಿ ಚಾರ್ಜಿಂಗ್ ಲೋಕದ ಯುಪಿಐ (UPI)
ಡಿಜಿಟಲ್ ಪಾವತಿಯಲ್ಲಿ ಯುಪಿಐ ತಂದ ಕ್ರಾಂತಿಯಂತೆಯೇ, ಎಲೆಕ್ಟ್ರಿಕ್ ವಾಹನ ಬಳಕೆದಾರರಿಗಾಗಿ ‘ಯೂನಿಫೈಡ್ ಭಾರತ್ ಇ-ಚಾರ್ಜ್ (UBC)’ ಎಂಬ ರಾಷ್ಟ್ರೀಯ ಏಕೀಕೃತ ಆ್ಯಪ್ ಅನ್ನು ಸಚಿವಾಲಯ ಅಭಿವೃದ್ಧಿಪಡಿಸುತ್ತಿದೆ. ಇದು ಇವಿ ಬಳಕೆದಾರರಿಗೆ ಯಾವುದೇ ಕಂಪನಿಯ ಚಾರ್ಜಿಂಗ್ ಪಾಯಿಂಟ್ ಅನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಪಾವತಿ ಮಾಡಲು ಒಂದೇ ವೇದಿಕೆಯನ್ನು ಒದಗಿಸಲಿದೆ ಎಂದು ತಿಳಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement