ಬೆಂಗಳೂರು : 35 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ ; 8 ಆರೋಪಿಗಳ ಬಂಧನ

ಬೆಂಗಳೂರು : ಇತ್ತೀಚಿನ ದಿನಗಳಲ್ಲೇ ಬೆಂಗಳೂರಿನಲ್ಲಿ ಅತ್ಯಂತ ಬೃಹತ್ ಎನ್ನಲಾದ ಅಂತರರಾಜ್ಯ ಮಾದಕ ವಸ್ತು ಜಾಲವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್‌ನ ಉತ್ತರ ವಿಭಾಗದ ಪೊಲೀಸರು ನಡೆಸಿದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಪಶ್ಚಿಮ ದೆಹಲಿಯ ರೀನಾ ಯಾದವ್ (50), ನವದೆಹಲಿಯ ದೆಬಾಶಿಶ್ ಬ್ಯಾನರ್ಜಿ (66), ಬೆಂಗಳೂರಿನ ಮೊಹಮ್ಮದ್ ಮನ್ಸೂರ್ ಪಿ (30), ಸೆನೆಗಲ್ ದೇಶದ ಡಾನ್ಫಾ ಜೆರಾಲ್ಡ್, ತಾಂಜಾನಿಯಾದ ಮಾಗ್ರೆತ್ ಲಿಗಿನಿಕೊ ಚಾಲೆ, ದೆಹಲಿಯ ಧೀರಜ (30), ದೆಹಲಿಯ ಓಬಿಯಾನುಜು ರಿಟಾ ಒಕೆಕೆ (34) ಮತ್ತು ದಕ್ಷಿಣ ಕನ್ನಡದ ಅಬ್ದುಲ್ ಸಮ್ಮದ್ (38) ಎಂದು ಗುರುತಿಸಲಾಗಿದೆ.
ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತಕುಮಾರ ಸಿಂಗ್ ಅವರು, “ಬಂಧಿತ ಎಂಟು ಆರೋಪಿಗಳಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಜನರನ್ನು ದೆಹಲಿಯಲ್ಲಿ ಬಂಧಿಸಿದ್ದರೆ, ಉಳಿದ ಇಬ್ಬರು ಸ್ಥಳೀಯರಾಗಿದ್ದಾರೆ” ಎಂದು ತಿಳಿಸಿದರು.

“ಜಂಟಿ ಪೊಲೀಸ್ ಕಮಿಷನರ್ (ಪಶ್ಚಿಮ) ಸಿ. ವಂಶಿ ಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ನಮ್ಮ ನಗರ ಪೊಲೀಸ್ ತಂಡದಿಂದ ಅತ್ಯಂತ ದೊಡ್ಡ ಡ್ರಗ್ಸ್ ಬೇಟೆ ಇದಾಗಿದೆ. ಇತ್ತೀಚೆಗೆ ಯಶವಂತಪುರದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಮುಂದುವರಿಸಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ,” ಎಂದು ಅವರು ವಿವರಿಸಿದರು.
ಕಾರ್ಯಾಚರಣೆಯ ವೇಳೆ ಪೊಲೀಸರು ಒಟ್ಟು 17.5 ಕೆಜಿ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ 17.5 ಕೋಟಿ ರೂಪಾಯಿಗಳಾಗಿದ್ದರೂ, ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ (ಸ್ಟ್ರೀಟ್ ವ್ಯಾಲ್ಯೂ) ಮೌಲ್ಯ ಸುಮಾರು ದುಪ್ಪಟ್ಟು ಅಂದರೆ 35 ಕೋಟಿ ರೂಪಾಯಿಗಳಾಗಿವೆ ಎಂದು ಅಂದಾಜಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಮೇ 11 ರಂದು ಆನಂದನಗರದ ಅಪಾರ್ಟ್‌ಮೆಂಟ್‌ ಒಂದರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮೂವರು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಹೆಬ್ಬಾಳ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಲಭಿಸಿತ್ತು.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ಖಚಿತ ಮಾಹಿತಿಯ ಆಧಾರದ ಮೇಲೆ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಸ್ಥಳದ ಮೇಲೆ ದಾಳಿ ನಡೆಸಿದರು. ಈ ವೇಳೆ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಯಿತು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಬ್ಬರು ಆರೋಪಿಗಳು ದೆಹಲಿಯ ಅಪರಿಚಿತ ಸರಬರಾಜುದಾರರಿಂದ ಕಡಿಮೆ ಬೆಲೆಗೆ ಎಂಡಿಎಂಎ (MDMA) ಖರೀದಿಸಿ, ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದರು.
ದಾಳಿಯ ಸಂದರ್ಭದಲ್ಲಿ ಪೊಲೀಸರು 4.180 ಕೆಜಿ ಎಂಡಿಎಂಎ ಮತ್ತು ಅಪರಾಧಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದರು. ತದನಂತರ ಆರೋಪಿಗಳ ಹೆಚ್ಚಿನ ವಿಚಾರಣೆಯಿಂದ ಲಭಿಸಿದ ಮಾಹಿತಿ ಆಧರಿಸಿ, ಮೇ 14 ರಂದು ಚಿಕ್ಕನಾಯಕನಹಳ್ಳಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಅಲ್ಲಿ ಅಡಗಿಸಿಡಲಾಗಿದ್ದ ಹೆಚ್ಚುವರಿ 10.120 ಕೆಜಿ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಯಿತು.

ದೆಹಲಿ, ಹರಿಯಾಣದಲ್ಲಿ ಮುಂದುವರಿದ ಬೇಟೆ
ಬೆಂಗಳೂರಿನಲ್ಲಿ ಸಿಕ್ಕ ಸುಳಿವುಗಳನ್ನು ಬೆನ್ನತ್ತಿದ ಪೊಲೀಸ್ ತಂಡವು ಹರಿಯಾಣ ಮತ್ತು ದೆಹಲಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿತು. ಇದರಲ್ಲಿ ಎಂಡಿಎಂಎ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಬ್ಬ ವಿದೇಶಿ ಪುರುಷ ಮತ್ತು ಇಬ್ಬರು ವಿದೇಶಿ ಮಹಿಳೆಯರು ಹಾಗೂ ದೆಹಲಿಯ ಮತ್ತೊಬ್ಬ ಆರೋಪಿ ಸೇರಿದ್ದಾರೆ.
ಮೇ 17 ರಂದು ಈ ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ (Transit Remand) ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಬಂಧಿತರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಹೆಣ್ಣೂರಿನಲ್ಲಿದ್ದ ಮತ್ತೊಬ್ಬ ಶಂಕಿತನ ಮಾಹಿತಿ ಸಿಕ್ಕಿದ್ದು, ಆತನನ್ನು ಬಂಧಿಸಿ ಆತನ ನಿವಾಸದಿಂದ ಹೆಚ್ಚುವರಿ 3.200 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಪ್ರಸ್ತುತ ಈ ದಂಧೆಗೆ ಸಂಬಂಧಿಸಿದ ಕೆಲವು ಪ್ರಮುಖ ಶಂಕಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement