ಕೋಲ್ಕತ್ತಾ : ಪಶ್ಚಿಮ ಬಂಗಾಳ ಸರ್ಕಾರವು ತನ್ನ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡುವ ನಿಯಮವನ್ನು ಈಗ ರಾಜ್ಯಾದ್ಯಂತ ಇರುವ ಮದ್ರಸಾಗಳಿಗೂ ಅನ್ವಯಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮದ್ರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ (ಅಸೆಂಬ್ಲಿ) ವೇಳೆ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿ ಕೇವಲ ಒಂದು ವಾರವಾದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರದಿಂದ ಈ ಹೊಸ ಆದೇಶ ಹೊರಬಿದ್ದಿದೆ.
ಮದ್ರಸಾ ನಿರ್ದೇಶನಾಲಯ ಹೊರಡಿಸಿರುವ ಇತ್ತೀಚಿನ ಆದೇಶದ ಪ್ರಕಾರ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮದ್ರಸಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನರಹಿತ ಮದ್ರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ಶಿಕ್ಷಣ ಸಂಬಂಧಿ ನಿರ್ಧಾರ ಇದಾಗಿದೆ.
ಕಳೆದ ವಾರವಷ್ಟೇ, ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು (Stanzas) ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿತ್ತು. ದಿನನಿತ್ಯದ ತರಗತಿಗಳು ಆರಂಭವಾಗುವ ಮುನ್ನ ವಿದ್ಯಾರ್ಥಿಗಳು ಈ ಗೀತೆಯನ್ನು ಹಾಡಬೇಕೆಂದು ಸೂಚಿಸಲಾಗಿತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, “ಹಳೆಯ ನಿರ್ದೇಶನವನ್ನು ರದ್ದುಗೊಳಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ತರಗತಿಗಳು ಆರಂಭವಾಗುವ ಮುನ್ನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಭಾರತದ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಅನ್ನು ಹಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿದೆ,” ಎಂದು ತಿಳಿಸಿದ್ದರು. ಈಗ ಇದೇ ನಿಯಮವನ್ನು ಮದ್ರಸಾಗಳಿಗೂ ವಿಸ್ತರಿಸಲಾಗಿದೆ.
ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ‘ವಂದೇ ಮಾತರಂ’ ದಶಕಗಳಿಂದಲೂ ಅತ್ಯಂತ ಪ್ರಭಾವಶಾಲಿ ಸಂಕೇತವಾಗಿ ಉಳಿದುಬಂದಿದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಟಗಾರರು ಈ ಗೀತೆಯನ್ನು ವ್ಯಾಪಕವಾಗಿ ಬಳಸಿದ್ದರು. ನಂತರದ ದಿನಗಳಲ್ಲಿ ಇದು ರಾಷ್ಟ್ರೀಯತಾವಾದಿ ಚಳವಳಿಗಳೊಂದಿಗೆ ನಿಕಟ ನಂಟು ಹೊಂದಿತ್ತು.
ಪ್ರಸಕ್ತ ವರ್ಷದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವು ಮತ್ತೆ ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿತ್ತು.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸಮಾನವಾದ ಸ್ಥಾನಮಾನವನ್ನು ನೀಡಿತ್ತು. ಈ ನಿರ್ಧಾರದ ನಂತರ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಾಲಾ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯೊಂದಿಗೆ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಯಿತು. ಈ ಬೆಳವಣಿಗೆಯು ವಿವಿಧ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಹೊಸ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲೂ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ