ತಂದೆ-ತಾಯಿ ಐಎಎಸ್ ಅಧಿಕಾರಿಗಳಾಗಿದ್ದರೆ ಮಕ್ಕಳಿಗೆ ಮೀಸಲಾತಿ ಯಾಕೆ ಬೇಕು : ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿ ಸಾಮಾಜಿಕವಾಗಿ ಮುನ್ನಡೆದಿರುವ ಕುಟುಂಬಗಳ ಮಕ್ಕಳಿಗೆ ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿ ಪ್ರಯೋಜನ ಪಡೆಯುವುದನ್ನು ಮುಂದುವರಿಸಬೇಕೇ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
“ತಂದೆ-ತಾಯಿ ಇಬ್ಬರೂ ಐಎಎಸ್ (IAS) ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ ಏಕೆ ಬೇಕು? ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದಿಂದ ಸಾಮಾಜಿಕವಾಗಿ ಸ್ಥಾನಮಾನ ಸುಧಾರಿಸುತ್ತದೆ. ಹೀಗಿದ್ದೂ ಅವರ ಮಕ್ಕಳೂ ಮತ್ತೆ ಮೀಸಲಾತಿ ಬಯಸಿದರೆ, ನಾವು ಈ ವ್ಯವಸ್ಥೆಯಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ,” ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಕಳವಳ ವ್ಯಕ್ತಪಡಿಸಿದರು.
“ಇದು ನಾವು ಗಂಭೀರವಾಗಿ ಯೋಚಿಸಬೇಕಾದ ವಿಷಯ. ಪೋಷಕರು ಓದಿದ್ದಾರೆ, ಉತ್ತಮ ಉದ್ಯೋಗದಲ್ಲಿದ್ದಾರೆ, ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಆದರೂ ಅವರ ಮಕ್ಕಳು ಮತ್ತೆ ಮೀಸಲಾತಿ ಕೇಳುತ್ತಿದ್ದಾರೆ. ಇಂತಹವರು ಮೀಸಲಾತಿಯಿಂದ ಹೊರಬರಬೇಕು,” ಎಂದು ನ್ಯಾ. ನಾಗರತ್ನ ಹೇಳಿದರು.
ಪ್ರಕರಣದ ಹಿನ್ನೆಲೆ ಏನು?
ಕರ್ನಾಟಕದ ‘ಕೆನೆಪದರ’ (Creamy Layer) ನಿಯಮದಡಿ ತಮ್ಮನ್ನು ಮೀಸಲಾತಿಯಿಂದ ಹೊರಗಿಟ್ಟ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಈ ಪ್ರಮುಖ ಅವಲೋಕನಗಳನ್ನು ಮಾಡಿದೆ.
ಅರ್ಜಿದಾರರು ಕರ್ನಾಟಕದ ಹಿಂದುಳಿದ ವರ್ಗಗಳ ಪ್ರವರ್ಗ-೨(ಎ) ಗೆ ಸೇರಿದ ಸಮುದಾಯದವರಾಗಿದ್ದಾರೆ. ಇವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (KPTCL) ಸಹಾಯಕ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿದ್ದರು.
ಆದರೆ, ಅರ್ಜಿದಾರರ ಪೋಷಕರಿಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರ ವಾರ್ಷಿಕ ಆದಾಯ ಸುಮಾರು ₹19.48 ಲಕ್ಷ ಇತ್ತು. ಈ ಹಿನ್ನೆಲೆಯಲ್ಲಿ ಅವರು ‘ಕೆನೆಪದರ’ ವ್ಯಾಪ್ತಿಗೆ ಬರುತ್ತಾರೆ ಎಂದು ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಅವರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತ್ತು.
ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, ಕುಟುಂಬಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುನ್ನಡೆದ ನಂತರವೂ ಮೀಸಲಾತಿ ಸೌಲಭ್ಯ ಮುಂದುವರಿಯುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು.
“ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಗೆ ಮೀಸಲಾತಿ ಅಗತ್ಯ, ಹೌದು. ಆದರೆ ಒಮ್ಮೆ ಪೋಷಕರು ಮೀಸಲಾತಿಯ ಪ್ರಯೋಜನ ಪಡೆದು ಉತ್ತಮ ಸ್ಥಾನ ತಲುಪಿದಾಗ, ಅವರ ಸಾಮಾಜಿಕ ಸ್ಥಾನಮಾನ ಬದಲಾಗುತ್ತದೆ. ಇಬ್ಬರೂ ಸರ್ಕಾರಿ ಸೇವೆಯಲ್ಲಿದ್ದು ಸುಸ್ಥಿತಿಯಲ್ಲಿದ್ದಾಗಲೂ ವಿನಾಯಿತಿಯನ್ನು ಪ್ರಶ್ನಿಸುತ್ತಿರುವುದನ್ನು ನಾವು ಗಮನಿಸಬೇಕಾಗುತ್ತದೆ. ಇಲ್ಲಿ ಒಂದು ರೀತಿಯ ಸಮತೋಲನ ಇರಬೇಕು,” ಎಂದರು. ಅರ್ಜಿದಾರರ ತಂದೆ ಪ್ರತಿ ತಿಂಗಳು ₹53,900 ಹಾಗೂ ತಾಯಿ ₹52,650 ಮೂಲ ವೇತನ ಪಡೆಯುತ್ತಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು.
 ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶಶಾಂಕ ರತ್ನೂ ಅವರು ಕೆನೆಪದರ ಗುರುತಿಸಲು ಕೇವಲ ಸಂಬಳದ ಆದಾಯವೇ ಮಾನದಂಡವಲ್ಲ ಎಂದು ವಾದಿಸಿದರು:
ಸರ್ಕಾರಿ ನೌಕರರ ವಿಷಯದಲ್ಲಿ ಕೆನೆಪದರ ನಿರ್ಧಾರವಾಗುವುದು ಪೋಷಕರ ಹುದ್ದೆಯ ಆಧಾರದ ಮೇಲೆ (ಅವರು ಗ್ರೂಪ್ ‘ಎ’ ಅಥವಾ ಗ್ರೂಪ್ ‘ಬಿ’ ಅಧಿಕಾರಿಯೇ ಎಂಬುದರ ಮೇಲೆ), ಕೇವಲ ಅವರ ಸಂಬಳದ ಮೇಲಲ್ಲ. ಸರ್ಕಾರಿ ನೌಕರರ ಸಂಬಳ ಮತ್ತು ಕೃಷಿ ಆದಾಯವನ್ನು ಕೆನೆಪದರಕ್ಕೆ ಪರಿಗಣಿಸಬಾರದು, ಕೇವಲ ವ್ಯಾಪಾರ ಅಥವಾ ಇತರ ಮೂಲಗಳ ಆದಾಯವನ್ನು ಮಾತ್ರ ಪರಿಗಣಿಸಬೇಕು ಎಂದು ಕರ್ನಾಟಕ ಸರ್ಕಾರದ ಸ್ಪಷ್ಟೀಕರಣವನ್ನು ಅವರು ಉಲ್ಲೇಖಿಸಿದರು.
ಒಂದು ವೇಳೆ ಕೆನೆಪದರ ನಿರ್ಧರಿಸಲು ಎಲ್ಲಾ ರೀತಿಯ ಆದಾಯವನ್ನು ಪರಿಗಣಿಸಿದರೆ, ಒಬಿಸಿ (OBC) ಮೀಸಲಾತಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಮೀಸಲಾತಿ ನಡುವೆ ಯಾವುದೇ ವ್ಯತ್ಯಾಸವೇ ಉಳಿಯುವುದಿಲ್ಲ ಎಂದು ಅವರು ವಾದಿಸಿದರು.
ಈ ಹಿಂದೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತು.
 ಕರ್ನಾಟಕದ ಕೆನೆಪದರ ನೀತಿಯ ಪ್ರಕಾರ, ಅಭ್ಯರ್ಥಿಯ ಕುಟುಂಬದ ಆದಾಯವು ನಿಗದಿಗಿಂತ ಹೆಚ್ಚಿರುವುದರಿಂದ ಅವರು ಕೆನೆಪದರ ವ್ಯಾಪ್ತಿಗೆ ಬರುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement