ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್ (FWICE) ನಟ ರಣವೀರ ಸಿಂಗ್ ವಿರುದ್ಧ ‘ಅಸಹಕಾರ’ (Non cooperation) ಆದೇಶ ಹೊರಡಿಸಿದ್ದು, ಈ ಮೂಲಕ ಚಿತ್ರರಂಗದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಯಾರೂ ಸಹಕರಿಸದಂತೆ ಮತ್ತು ಕೆಲಸ ಮಾಡದಂತೆ ಸೂಚಿಸಿ, ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ರಣವೀರ ಸಿಂಗ್ ಹಠಾತ್ ಹೊರನಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫರ್ಹಾನ್ ಅಖ್ತರ್ ಒಕ್ಕೂಟಕ್ಕೆ ದೂರು ನೀಡಿ ಐದು ತಿಂಗಳ ನಂತರ ಎಫ್ಡಬ್ಯುಐಸಿಇ(FWICE) ಈ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಫ್ಡಬ್ಯುಐಸಿಇ(FWICE)ಮುಖ್ಯ ಸಲಹೆಗಾರ ಹಾಗೂ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ (IFTDA) ಅಧ್ಯಕ್ಷ ಅಶೋಕ ಪಂಡಿತ್ ಈ ನಿರ್ಧಾರದ ಹಿಂದಿನ ಸಂಪೂರ್ಣ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ.
ಅಶೋಕ ಪಂಡಿತ್ ಅವರ ಪ್ರಕಾರ, ಇದು ಏಪ್ರಿಲ್ 11 ರಂದು ಪ್ರಾರಂಭವಾಯಿತು. “ಏಪ್ರಿಲ್ 11 ರಂದು ಫರ್ಹಾನ್ ಅಖ್ತರ್ ಅವರು ಎಫ್ಡಬ್ಯುಐಸಿಇ(FWICE)ಗೆ ರಣವೀರ ಸಿಂಗ್ ವಿರುದ್ಧ ಲಿಖಿತ ದೂರು ನೀಡಲು ಬಯಸುವುದಾಗಿ ತಿಳಿಸಿದರು. ಅಸೋಸಿಯೇಷನ್ ಮುಖ್ಯಸ್ಥನಾಗಿ ನಾನು ಆ ದೂರನ್ನು ಸ್ವೀಕರಿಸಿದೆ ಎಂದು ಪಂಡಿತ್ ತಿಳಿಸಿದ್ದಾರೆ.
ಚಿತ್ರದ ಶೂಟಿಂಗ್ ತಂಡವು ವಿದೇಶಕ್ಕೆ ಹೊರಡಲು ಕೇವಲ ಮೂರು ವಾರಗಳು ಬಾಕಿ ಇರುವಾಗ ರಣವೀರ ಸಿಂಗ್ ಯೋಜನೆಯಿಂದ ಹಿಂದೆ ಸರಿದಿದ್ದಾರೆ, ಇದರಿಂದಾಗಿ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಭಾರಿ ನಷ್ಟ ಹಾಗೂ ಅಡಚಣೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಎರಡು ಗಂಟೆಗಳ ಸುದೀರ್ಘ ಸಭೆ
ದೂರು ಬಂದ ನಂತರ, ಒಕ್ಕೂಟದ ನಿಯಮಾವಳಿಗಳ ಪ್ರಕಾರ ಎಫ್ಡಬ್ಯುಐಸಿಇ(FWICE) ಪದಾಧಿಕಾರಿಗಳು ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ ಸಿಧ್ವಾನಿ ಅವರನ್ನು ವಿವರಣೆಗಾಗಿ ಆಹ್ವಾನಿಸಿದ್ದರು. ರಿತೇಶ ಸಿಧ್ವಾನಿ ಖುದ್ದಾಗಿ ಕಚೇರಿಗೆ ಹಾಜರಾಗಿದ್ದರೆ, ಫರ್ಹಾನ್ ಅಖ್ತರ್ ಲಂಡನ್ನಿಂದ ವರ್ಚುವಲ್ (ವಿಡಿಯೋ ಕಾಲ್) ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಅವರು ತಮಗಾದ ತೊಂದರೆಗಳು ಮತ್ತು ಘಟನೆಗಳ ಸರಣಿಯನ್ನು ಒಕ್ಕೂಟದ ಮುಂದೆ ವಿವರವಾಗಿ ಮಂಡಿಸಿದರು.
ನೈಸರ್ಗಿಕ ನ್ಯಾಯದ ತತ್ವವನ್ನು ಪಾಲಿಸಿದ ಎಫ್ಡಬ್ಯುಐಸಿಇ(FWICE), ರಣವೀರ ಸಿಂಗ್ ಅವರಿಗೂ ತಮ್ಮ ವಾದ ಮಂಡಿಸಲು ಸಂಪೂರ್ಣ ಅವಕಾಶ ನೀಡಿತ್ತು. ಪ್ರತಿ 10 ರಿಂದ 15 ದಿನಗಳಿಗೊಮ್ಮೆ ರಣವೀರ್ ಅವರಿಗೆ ನೆನಪೋಲೆಗಳನ್ನು ಕಳುಹಿಸಲಾಯಿತು ಎಂದು ಪಂಡಿತ್ ಹೇಳಿದರು.
ಒಟ್ಟು ಮೂರು ಅಧಿಕೃತ ನೋಟಿಸ್ಗಳನ್ನು ನೀಡಿದರೂ ನಟನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ, ಎಫ್ಡಬ್ಯುಐಸಿಇ(FWICE) ಪತ್ರಿಕಾಗೋಷ್ಠಿ ಹಮ್ಮಿಕೊಂಡ ವಿಷಯ ತಿಳಿಯುತ್ತಿದ್ದಂತೆ, ರಣವೀರ ಸಿಂಗ್ ಅವರ ತಂಡವು ಒಕ್ಕೂಟಕ್ಕೆ ಇಮೇಲ್ ಕಳುಹಿಸಿದೆ. ಅದರಲ್ಲಿ, ಈ ವಿವಾದದಲ್ಲಿ ಮಧ್ಯಪ್ರವೇಶಿಸಲು ಎಫ್ಡಬ್ಯುಐಸಿಇ(FWICE) ಯಾವುದೇ ಅಧಿಕಾರ ವ್ಯಾಪ್ತಿ (Jurisdiction) ಇಲ್ಲ ಎಂದು ಹೇಳಿದೆ ಎಂದು ತಿಳಿಸಿದರು.
ಸಾವಿರಾರು ಕಾರ್ಮಿಕರ ಹಿತದೃಷ್ಟಿಯಿಂದ ನಿರ್ಧಾರ
ರಣವೀರ ಸಿಂಗ್ ಅವರ ಬೇಜವಾಬ್ದಾರಿತನದಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಎಫ್ಡಬ್ಯುಐಸಿಇ(FWICE) ಅಧ್ಯಕ್ಷ ಬಿ.ಎನ್. ತಿವಾರಿ ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಒಬ್ಬ ನಟ ಮತ್ತು ನಿರ್ಮಾಪಕನ ನಡುವಿನ ಜಗಳವಲ್ಲ, ಬದಲಿಗೆ ಸಾವಿರಾರು ಚಲನಚಿತ್ರ ಕಾರ್ಮಿಕರ ಜೀವನೋಪಾಯದ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
“ಒಂದು ಸಿನಿಮಾ ಆರಂಭವಾದಾಗ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಸಿನಿಮಾ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ ಜೂನಿಯರ್ ಆರ್ಟಿಸ್ಟ್ಗಳು ಮತ್ತು ದಿನಗೂಲಿ ಕಾರ್ಮಿಕರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಾರೆ. ಚಿತ್ರರಂಗದಲ್ಲಿ ಯಾರೇ ಸೂಪರ್ಸ್ಟಾರ್ ಆಗಿದ್ದರೂ ಅವರು ನಿಯಮಗಳಿಗಿಂತ ಮಿಗಿಲಲ್ಲ ಎಂಬ ಬಲವಾದ ಸಂದೇಶ ರವಾನೆಯಾಗಬೇಕಿದೆ, ಎಂದು ಬಿ.ಎನ್. ತಿವಾರಿ ಹೇಳಿದ್ದಾರೆ.
ಎಫ್ಡಬ್ಯುಐಸಿಇ(FWICE) ಒಕ್ಕೂಟವು ಕೇವಲ ತಂತ್ರಜ್ಞರನ್ನು ಮಾತ್ರವಲ್ಲದೆ ಕಲಾವಿದರು ಮತ್ತು ನಿರ್ಮಾಪಕರನ್ನೂ ಪ್ರತಿನಿಧಿಸುವುದರಿಂದ ಯಾವುದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ ಎಂದು ತಿವಾರಿ ತಿಳಿಸಿದ್ದಾರೆ.
ಪ್ರಸ್ತುತ, ರಣವೀರ್ ಸಿಂಗ್ ವಿರುದ್ಧ ತಕ್ಷಣದಿಂದಲೇ ಜಾರಿಗೆ ಬರುವಂತೆ ‘ಅಸಹಕಾರ ಆದೇಶ’ವನ್ನು ಹೊರಡಿಸಲಾಗಿದ್ದು, ಒಕ್ಕೂಟಕ್ಕೆ ಸಂಯೋಜಿತವಾಗಿರುವ ಯಾವುದೇ ಕ್ರಾಫ್ಟ್ನ ಕಾರ್ಮಿಕರು, ತಂತ್ರಜ್ಞರು ಅಥವಾ ನಿರ್ಮಾಪಕ ಸಂಸ್ಥೆಗಳು ಈ ವಿವಾದ ಬಗೆಹರಿಯುವವರೆಗೂ ರಣವೀರ ಸಿಂಗ್ ಜೊತೆ ಸಹಕರಿಸಬಾರದು ಮತ್ತು ಕೆಲಸ ಮಾಡಬಾರದು ಎಂದು ಮನವಿ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ