ಮಂತ್ರಾಲಯ : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಬಳಿ ತುಂಗಭದ್ರಾ ನದಿಗೆ ಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ರಕ್ಷಿಸಲು ಹೋದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸ್ಥಳೀಯ ನಿವಾಸಿಯಾದ ಬಾಲಕಿ ಶನಿವಾರ ಸಂಜೆ ಸುಮಾರು 4:30 ರ ಸುಮಾರಿಗೆ ನದಿಯ ದಂಡೆಯ ಮೇಲೆ ಕಾಲು ತೊಳೆಯಲು ಹೋಗಿದ್ದಾಳೆ. ಈ ವೇಳೆ ಆಕೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ನೀರಿನ ತೀವ್ರ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಲಾರಂಭಿಸಿದ್ದಾಳೆ. ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಬಾಲಕಿಯನ್ನು ಉಳಿಸಲು ಐವರು ವ್ಯಕ್ತಿಗಳು ನದಿಗೆ ಇಳಿದಿದ್ದರು. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ, ಆದರೆ ಆಕೆಯನ್ನು ರಕ್ಷಿಸಲು ಹೋದ ಐವರುನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
.ಮೃತರನ್ನು ನೆರೆಯ ಗ್ರಾಮಗಳ ನಿವಾಸಿಗಳು ಎಂದು ಗುರುತಿಸಲಾಗಿದೆ. ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣವೇ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಮೃತದೇಹಗಳ ಪತ್ತೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳ ನೆರವಿನೊಂದಿಗೆ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ದುರಂತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ಸೆಕ್ಷನ್ 194ರ ಅಡಿಯಲ್ಲಿ (ನೀರಿನಲ್ಲಿ ಮುಳುಗಿ ಸಾವು) ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ