ಡಿಕೆಶಿ ಪ್ರಮಾಣವಚನಕ್ಕೂ ಮುನ್ನ ಜಮೀರ್ ಅಹ್ಮದ್ ಆಡಿಯೋ ವೈರಲ್‌ ; ಕಾಂಗ್ರೆಸ್ಸಿನಲ್ಲಿ ತಲ್ಲಣ ; ಅದು ನಕಲಿ ಎಂದ ಜಮೀರ್‌

ಬೆಂಗಳೂರು: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ,  ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪಿತ ಆಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದಕ್ಕೆ ಜಮೀರ್ ಅಹಮದ್ ಖಾನ್ ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ  ಅಂತರ ಕಾಯ್ದುಕೊಂಡಿದ್ದರು. ಸಕ್ರಿಯವಾಗಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ. ಹೀಗಿದ್ದರೂ ಸಮರ್ಥ ಶಾಮನೂರು ಅವರು ಜಯಗಳಿಸಿದ್ದರು.  ಈಗ ಡಿ.ಕೆ.ಶಿವಕುಮಾರ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹೊಸ್ತಿಲಲ್ಲಿ ಈ ಆಡಿಯೋ ವೈರಲ್‌ ಆಗಿದೆ (ಈ ವೈರಲ್ ಆಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಧೃಡೀಕರಿಸಲಾಗಿಲ್ಲ).
https://twitter.com/i/status/2061211281668124789
ವೈರಲ್ ಆದ ಆಡಿಯೋದಲ್ಲಿ ಏನಿದೆ?
ಏಪ್ರಿಲ್ 9 ರಂದು ಮತದಾನ ನಡೆಯುತ್ತಿದ್ದ ವೇಳೆ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ನಿರ್ದೇಶಕ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್‌ನಲ್ಲಿ ಆಡಿಯೋ ಬಿಡುಗಡೆಯಾಗಿದೆ.
ಈ ಆಡಿಯೋದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಜಮೀರ್ ಅವರು ಸಿರಾಜ್ ಅವರಿಗೆ ಸೂಚನೆ ನೀಡುತ್ತಿರುವುದು ಪರೋಕ್ಷವಾಗಿ ಕೇಳಿಬಂದಿದೆ.  ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮಾತನಾಡಲಾಗಿದೆ. ʻದಾವಣಗೆರೆ ಬೈ ಎಲೆಕ್ಷನ್‌ನಲ್ಲಿ ಕುಕ್ಕರ್‌ಗೆ ವೋಟ್‌ ಬೀಳಬೇಕುʼ ಎಂದು ಅವರು ಮಾತನಾಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ. ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ, ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಹೇಳಿರುವುದು ಈ ಆಡಿಯೊದಲ್ಲಿ ಕೇಳಿಬಂದಿದೆ.
ಈ ಎಲ್ಲ ಆರೋಪಗಳ ನಡುವೆಯೂ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಜಯ ಸಾಧಿಸಿದ್ದಾರೆ.
ಜಮೀರ್ ಸ್ಪಷ್ಟನೆ
ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಜಮೀರ್ ಅಹಮದ್ ಖಾನ್ ಅವರ ಈ ನಡೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಭಾರಿ ಆಘಾತ ನೀಡಿದೆ. ಈ ವಿಷಯದ ಕುರಿತು ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ಮತ್ತೊಂದೆಡೆ, ಈ ಆರೋಪಗಳನ್ನು ಸಚಿವರ ಕಚೇರಿ ಸಂಪೂರ್ಣವಾಗಿ ತಳ್ಳಿಹಾಕಿದೆ. “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಸಂಪೂರ್ಣ ನಕಲಿಯಾಗಿದ್ದು, ಸಚಿವರ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಪಿತೂರಿ” ಎಂದು ಜಮೀರ್ ಕಚೇರಿ ಸ್ಪಷ್ಟನೆ ನೀಡಿದೆ. ಇದೊಂದು ನಕಲಿ ಆಡಿಯೋ ಹಾಗೂ
ರಾಜಕೀಯ ಭವಿಷ್ಯ ಮುಗಿಸಲು ಹೆಣೆದಿರುವ ಭಾರಿ ಷಡ್ಯಂತ್ರ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಪೂರ್ಣ ನಕಲಿ. ಇತ್ತೀಚಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ವಾಯ್ಸ್ ಕ್ಲೋನಿಂಗ್ ಬಳಸಿ ನನ್ನ ಧ್ವನಿಯನ್ನು ಸೃಷ್ಟಿಸಲಾಗಿದೆ. ನನ್ನ ಇಮೇಜ್ ಹಾಳು ಮಾಡಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಇದನ್ನು ಯಾರೂ ನಂಬಬಾರದು. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಅವರು ಹೇಳಿದ್ದಾರೆ. .
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement