
ನವದೆಹಲಿ: ಪಕ್ಷದೊಳಗಿನ ಭಿನ್ನಮತ ಮತ್ತು ಸರಣಿ ಬಂಡಾಯದಿಂದ ಕಂಗಾಲಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (TMC) ಸುಪ್ರಿಮೋ ಮಮತಾ ಬ್ಯಾನರ್ಜಿಗೆ ಮತ್ತೊಂದು ತೀವ್ರ ಆಘಾತ ಎದುರಾಗಿದೆ. ಟಿಎಂಸಿ ಹಿರಿಯ ನಾಯಕಿ ಸುಶ್ಮಿತಾ ದೇವ್ ಅವರು ಬುಧವಾರ ತಮ್ಮ ರಾಜ್ಯಸಭಾ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿಗಳಾದ ಸಿ. ಪಿ. ರಾಧಾಕೃಷ್ಣನ್ ಅವರಿಗೆ ಸುಶ್ಮಿತಾ ದೇವ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. “ನಾನು ನನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು, ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಬೇಕಾಗಿ ವಿನಂತಿ. ನನ್ನ ಸಂಸತ್ ಅವಧಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಗೌರವಾನ್ವಿತ ಸಭಾಪತಿಗಳು, ಉಪಸಭಾಪತಿಗಳು ಹಾಗೂ ರಾಜ್ಯಸಭಾ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ,” ಎಂದು ಸುಶ್ಮಿತಾ ದೇವ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕುಸಿಯುತ್ತಿರುವ ಟಿಎಂಸಿ ಸಂಸದರ ಬಲ
ಸುಖೇಂದು ಶೇಖರ ರಾಯ್ ಅವರ ಬಳಿಕ ಸುಶ್ಮಿತಾ ದೇವ್ ರಾಜ್ಯಸಭೆಗೆ ರಾಜೀನಾಮೆ ನೀಡಿದ ಟಿಎಂಸಿಯ ಎರಡನೇ ಸಂಸದರಾಗಿದ್ದಾರೆ. ಇವರಿಬ್ಬರ ರಾಜೀನಾಮೆಯಿಂದಾಗಿ ಸದ್ಯ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ನ ಸದಸ್ಯರ ಬಲ 11ಕ್ಕೆ ಕುಸಿದಿದೆ. ಕೇವಲ ರಾಜ್ಯಸಭೆ ಮಾತ್ರವಲ್ಲದೆ, ಲೋಕಸಭೆಯಲ್ಲೂ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆಯಾಗಿದೆ. ಪಕ್ಷದ ಒಟ್ಟು 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಈಗಾಗಲೇ ಬಂಡಾಯವೆದ್ದಿದ್ದು, ಆಡಳಿತಾರೂಢ ಎನ್ಡಿಎ (NDA) ಒಕ್ಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದು ಸಂಸತ್ತಿನಲ್ಲಿ ಟಿಎಂಸಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ.
ಅಸ್ಸಾಂ ಸಿಎಂ ಭೇಟಿಯಾದ ಸುಶ್ಮಿತಾ: ಬಿಜೆಪಿ ಸೇರ್ಪಡೆ ?
ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಸುಶ್ಮಿತಾ ದೇವ್ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅವರು ಶೀಘ್ರದಲ್ಲೇ ಭಾರತೀಯ ಜನತಾ ಪಾರ್ಟಿ (BJP) ಸೇರಲಿದ್ದಾರೆ ಎಂಬ ವದಂತಿಗಳಿಗೆ ಈ ಭೇಟಿ ಮತ್ತಷ್ಟು ಪುಷ್ಟಿ ನೀಡಿದೆ.
ದೀದಿಗೆ ಸಾಲು ಸಾಲು ಹಿನ್ನಡೆ
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲೂ ಮಮತಾ ಬ್ಯಾನರ್ಜಿ ಅವರಿಗೆ ಬಂಡಾಯದ ಬಿಸಿ ತಟ್ಟಿದೆ. ಇತ್ತೀಚೆಗಷ್ಟೇ ಪಕ್ಷದ ಹಿರಿಯ ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಟಿಎಂಸಿಯ 58 ಶಾಸಕರು ದೀದಿ ವಿರುದ್ಧ ತಿರುಗಿಬಿದ್ದಿದ್ದರು. ಇದರ ಬೆನ್ನಲ್ಲೇ ಈಗ ಸಂಸದರ ರಾಜೀನಾಮೆ ಪರ್ವ ಮುಂದುವರಿದಿರುವುದು ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸುಶ್ಮಿತಾ ದೇವ್ ರಾಜಕೀಯ ಹಿನ್ನೆಲೆ:
ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದೆಯಾಗಿದ್ದ ಸುಶ್ಮಿತಾ ದೇವ್, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ತದನಂತರ 2021ರಲ್ಲಿ ಅವರು ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ್ದರು. ಪಕ್ಷ ಸೇರಿದ ಅಲ್ಪಾವಧಿಯಲ್ಲೇ ಮಮತಾ ಬ್ಯಾನರ್ಜಿ ಅವರ ವಿಶ್ವಾಸ ಗಳಿಸಿದ್ದ ಇವರು, ಟಿಎಂಸಿಯ ರಾಷ್ಟ್ರೀಯ ವಕ್ತಾರೆಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಪಕ್ಷ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಆದರೆ ಈಗ ದೀದಿ ಆಪ್ತ ವಲಯದಿಂದಲೇ ಸುಶ್ಮಿತಾ ಹೊರಬಂದಿರುವುದು ಟಿಎಂಸಿ ಪಾಲಿಗೆ ನುಂಗಲಾರದ ತುತ್ತಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ