
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಭಿನ್ನಮತ ಈಗ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಹಲವು ನಾಯಕರು ಮತ್ತು ಸಂಸದರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರೂ, ಪಕ್ಷ ಹಾಗೂ ಮಮತಾ ಬ್ಯಾನರ್ಜಿಗೆ ನಿಷ್ಠರಾಗಿ ಉಳಿದಿದ್ದ ಹಿರಿಯ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಗುರುವಾರ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗೆ ನೇರ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಹಿ ನಕಲು (Signature Forgery) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ನಲ್ಲಿ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ, ಖ್ಯಾತ ವಕೀಲರೂ ಆಗಿರುವ ಕಲ್ಯಾಣ ಬ್ಯಾನರ್ಜಿ ಅವರನ್ನು ಕೊನೆಯ ಕ್ಷಣದಲ್ಲಿ ಕಾನೂನು ಸಲಹೆಗಾರರ (ವಕೀಲರ) ಹುದ್ದೆಯಿಂದ ಅಭಿಷೇಕ ಬ್ಯಾನರ್ಜಿ ಕೈಬಿಟ್ಟಿದ್ದರು. ಅಭಿಷೇಕ ಬ್ಯಾನರ್ಜಿ ಅವರ ಈ ನಡವಳಿಕೆಯನ್ನು ತಮಗೆ ಮಾಡಿದ “ಘೋರ ಅವಮಾನ” ಎಂದು ಕಲ್ಯಾಣ ಬ್ಯಾನರ್ಜಿ ಬಣ್ಣಿಸಿದ್ದಾರೆ.
“ಅಭಿಷೇಕ ಬ್ಯಾನರ್ಜಿ ಅಥವಾ ನಾವು — ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ” ಎಂದು ಕಲ್ಯಾಣ ಬ್ಯಾನರ್ಜಿ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಸ್ಪಷ್ಟವಾಗಿ ಹೇಳಿರುವುದು ಪಕ್ಷದ ಉನ್ನತ ನಾಯಕತ್ವದಲ್ಲಿನ ಬಿರುಕನ್ನು ಮತ್ತಷ್ಟು ಬಹಿರಂಗಪಡಿಸಿದೆ.
ವಿವಾದಕ್ಕೆ ಕಾರಣವೇನು?
ಕಲ್ಕತ್ತಾ ಹೈಕೋರ್ಟ್ನಲ್ಲಿ ನಡೆಯುತ್ತಿರುವ ಸಹಿ ನಕಲು ಪ್ರಕರಣದಲ್ಲಿ ಅಭಿಷೇಕ ಬ್ಯಾನರ್ಜಿ ಪರವಾಗಿ ಕಲ್ಯಾಣ ಬ್ಯಾನರ್ಜಿ ವಾದ ಮಂಡಿಸಬೇಕಿತ್ತು. ಆದರೆ ಹೈಕೋರ್ಟ್ ಕಲಾಪದ ವೇಳೆ ಕಲ್ಯಾಣ ಬ್ಯಾನರ್ಜಿ ಅವರನ್ನು ಬದಲಾಯಿಸಿ, ಮತ್ತೊಬ್ಬ ವಕೀಲರನ್ನು ನೇಮಿಸಲಾಯಿತು.
ಇದೇ ವೇಳೆ, ಹೈಕೋರ್ಟ್ ಅಭಿಷೇಕ ಬ್ಯಾನರ್ಜಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದು, ಅಂದೇ ಸಂಜೆ 6 ಗಂಟೆಯೊಳಗೆ ಪಶ್ಚಿಮ ಬಂಗಾಳದ ಸಿಐಡಿ (CID) ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಸದ್ಯ ಅಭಿಷೇಕ ಬ್ಯಾನರ್ಜಿ ನವದೆಹಲಿಯಲ್ಲಿದ್ದಾರೆ.
‘ದೀದಿಗೆ ಸ್ಪಷ್ಟವಾಗಿ ಹೇಳಿದ್ದೇನೆ’: ಕಲ್ಯಾಣ ಬ್ಯಾನರ್ಜಿ ಆಕ್ರೋಶ
ಕೋಲ್ಕತ್ತಾದಲ್ಲಿ ಮಾಧ್ಯಮದವರ ಮುಂದೆ ತಮ್ಮ ಆಕ್ರೋಶ ಹೊರಹಾಕಿದ ಕಲ್ಯಾಣ ಬ್ಯಾನರ್ಜಿ, ತಾವು ಅನುಭವಿಸಿದ ಅವಮಾನದ ಬಗ್ಗೆ ಹೇಳಿದ್ದಾರೆ.
“ನಾನು ಇಡೀ ರಾತ್ರಿ ನಿದ್ದೆಗೆಟ್ಟು ಈ ಪ್ರಕರಣದ ಸಿದ್ಧತೆ ಮಾಡಿಕೊಂಡಿದ್ದೆ. ತುರ್ತು ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ವಿಷಯವನ್ನೂ ಮಂಡಿಸಿದ್ದೆ. ಆದರೆ ಇಂದು ಬೆಳಿಗ್ಗೆ ಬೇರೆ ಅರ್ಜಿಯೊಂದನ್ನು ದಾಖಲಿಸಲಾಗಿದ್ದು, ಮತ್ತೊಬ್ಬ ವಕೀಲರು ಈ ಪ್ರಕರಣವನ್ನು ನಿಭಾಯಿಸಲಿದ್ದಾರೆ ಎಂದು ನನಗೆ ತಿಳಿಸಲಾಯಿತು” ಎಂದು ಹೇಳಿದ್ದಾರೆ.
ಅವರಿಗಿರುವ (ಅಭಿಷೇಕ ಬ್ಯಾನರ್ಜಿ) ಇತರರನ್ನು ಗೌರವಿಸದ ಹಳೇ ಚಾಳಿ ಇನ್ನೂ ಬದಲಾಗಿಲ್ಲ. ಎಲ್ಲರೂ ತಮಗಿಂತ ಕೀಳು, ಹಾಗೂ ತಾವಿರುವ ಕ್ಯಾಮಕ್ ಸ್ಟ್ರೀಟ್ ಕಚೇರಿಯ ಕೇವಲ ಸಂಬಳದ ನೌಕರರು ಎಂದು ಅವರು ಭಾವಿಸಿದ್ದಾರೆ. ನಾನು ಈ ವಕೀಲಿ ವೃತ್ತಿಯಲ್ಲಿ 45 ವರ್ಷಗಳನ್ನು ಕಳೆದಿದ್ದೇನೆ ” ಎಂದು ಕಲ್ಯಾಣ ಬ್ಯಾನರ್ಜಿ ಹೇಳಿದ್ದಾರೆ.
“ಅವರ (ಅಭಿಷೇಕ) ಅಹಂಕಾರ ಮಿತಿ ಮೀರಿದೆ, ಯಾರನ್ನೂ ಗೌರವಿಸುವುದಿಲ್ಲ. ಹಾಗಾಗಿಯೇ ನಾನು ಈ ಪ್ರಕರಣದಿಂದ ದೂರ ಸರಿದಿದ್ದೇನೆ. ನನ್ನ ಮತ್ತು ಅಭಿಷೇಕ ಬ್ಯಾನರ್ಜಿ ಇಬ್ಬರಲ್ಲಿ ಒಬ್ಬರನ್ನು ನೀವೀಗ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಂದು (ಗುರುವಾರ) ಬೆಳಗ್ಗೆ ನಾನು ದೀದಿ (ಮಮತಾ ಬ್ಯಾನರ್ಜಿ) ಅವರಿಗೂ ಸ್ಪಷ್ಟವಾಗಿ ಹೇಳಿದ್ದೇನೆ” ಎಂದು ಕಲ್ಯಾಣ ಬ್ಯಾನರ್ಜಿ ಹೇಳಿದರು.
ಟಿಎಂಸಿಯಲ್ಲಿ ಮುಂದುವರಿದ ವಲಸೆ ಪರ್ವ
ಕಲ್ಯಾಣ ಬ್ಯಾನರ್ಜಿ ಅವರ ಈ ಅಸಮಾಧಾನವು ಟಿಎಂಸಿಗೆ ಮತ್ತೊಂದು ದೊಡ್ಡ ಹೊಡೆತ ನೀಡುವ ಮುನ್ಸೂಚನೆಯಾಗಿದೆ. ಈಗಾಗಲೇ ಪಕ್ಷದ ನಾಯಕತ್ವ, ಅದರಲ್ಲೂ ಮುಖ್ಯವಾಗಿ ಅಭಿಷೇಕ ಬ್ಯಾನರ್ಜಿ ಅವರ ಕಾರ್ಯವೈಖರಿಯಿಂದ ಬೇಸತ್ತು ಹಲವು ಸಂಸದರು ಮತ್ತು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ.
ಗುರುವಾರವಷ್ಟೇ ಪ್ರಕಾಶ ಚಿಕ್ ಬಾರೈಕ್ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಾಲ್ಕು ದಿನಗಳ ಅಂತರದಲ್ಲಿ ಸುಶ್ಮಿತಾ ದೇವ್ ಮತ್ತು ಸುಖೇಂದು ಶೇಖರ ರಾಯ್ ರಾಜೀನಾಮೆ ನೀಡಿದ್ದು, ಪ್ರಕಾಶ ಬಾರೈಕ್ ರಾಜೀನಾಮೆ ನೀಡಿದ ಮೂರನೇ ಟಿಎಂಸಿ ಸಂಸದರಾಗಿದ್ದಾರೆ.
ಕಳೆದ ವಾರವಷ್ಟೇ ಟಿಎಂಸಿಯ 58 ಶಾಸಕರು ಪಕ್ಷದ ಅಧಿಕೃತ ಅಭ್ಯರ್ಥಿ ಶೋವಂದೇಬ ಚಟ್ಟೋಪಾಧ್ಯಾಯ ಅವರನ್ನು ತಿರಸ್ಕರಿಸಿ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸುವ ಮೂಲಕ ಪಕ್ಷದ ನಾಯಕತ್ವಕ್ಕೆ ಬಹಿರಂಗ ಸವಾಲು ಹಾಕಿದ್ದರು. ಈಗ ಮಮತಾ ಬ್ಯಾನರ್ಜಿ ಅವರ ಆಪ್ತ ಎಂದೇ ಪರಿಗಣಿತವಾಗಿರುವ ಕಲ್ಯಾಣ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ನಾವು ಬೇಕೋ ಅಥವಾ ಅಭಿಷೇಕ ಬೇಕೋ ನಿರ್ಧರಿಸಿ ಎಂದು ಹೇಳಿರುವುದು ಬಿಕ್ಕಟ್ಟು ಇನ್ನಷ್ಟು ಉಲಬಣಗೊಂಡಿರುವುದನ್ನು ಸೂಚಿಸುವಂತಿದೆ.



ನಿಮ್ಮ ಕಾಮೆಂಟ್ ಬರೆಯಿರಿ