ಮಮತಾಗೆ ಮತ್ತೊಂದು ಆಘಾತ : ಟಿಎಂಸಿಗೆ ಮತ್ತೊಬ್ಬ ರಾಜ್ಯಸಭಾ ಸದಸ್ಯ ರಾಜೀನಾಮೆ…!

ನವದೆಹಲಿ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗುರುವಾರ ರಾಜ್ಯಸಭಾ ಸದಸ್ಯ ಪ್ರಕಾಶ ಬಾರೈಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮಮತಾ ಬ್ಯಾನರ್ಜಿಗೆ ಮತ್ತೊಂದು ಭಾರಿ ಆಘಾತ ನೀಡಿದ್ದಾರೆ.
ಇವರು ಒಂದು ವಾರದೊಳಗೆ ಟಿಎಂಸಿ ತೊರೆದ ಮೂರನೇ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಸುಖೇಂದು ಶೇಖರ ರಾಯ್ ಮತ್ತು ಸುಶ್ಮಿತಾ ದೇವ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಬಾರೈಕ್ ಅವರ ನಿರ್ಗಮನದೊಂದಿಗೆ ಮೇಲ್ಮನೆಯಲ್ಲಿ ಟಿಎಂಸಿ ಸಂಸದರ ಸಂಖ್ಯಾಬಲ 10 ಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ, ಮುಂಬರುವ ಮುಂದಿನ ಒಂದು ವಾರದೊಳಗೆ ಪಕ್ಷದ ಮತ್ತಿಬ್ಬರು ಅಥವಾ ಮೂವರು ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸುವೇಂದು ಅಧಿಕಾರಿಗೆ ಜೈ ಎಂದ ಬಾರೈಕ್ !
ತಮ್ಮ ರಾಜೀನಾಮೆಯ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಕಾಶ ಬಾರೈಕ್ಾವರು, “ನಾನು ಯಾವುದೇ ರೀತಿಯಲ್ಲಿ ಬಿಜೆಪಿ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ. ಬಂಗಾಳದ ಜನರ ಜನಾಭಿಪ್ರಾಯವನ್ನು ಗೌರವಿಸಿ ಈ ತೀರ್ಮಾನ ತಗೆದುಕೊಂಡಿದ್ದೇನೆ. ಇನ್ನು ಮುಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನೀಡುವ ನಿರ್ದೇಶನದಂತೆ ನಾನು ಮುನ್ನಡೆಯಲಿದ್ದೇನೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕಾಶ ಬಾರೈಕ್ ಯಾರು..?
ಪ್ರಕಾಶ್ ಚಿಕ್ ಬರೈಕ್ ಪಶ್ಚಿಮ ಬಂಗಾಳದ ಪ್ರಮುಖ ಬುಡಕಟ್ಟು ರಾಜಕೀಯ ನಾಯಕ. ಅವರು ಸಿಲಿಗುರಿ ಪ್ರದೇಶದ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ರಾಜ್ಯದ ಉತ್ತರ ಭಾಗದಲ್ಲಿರುವ ಅಲಿಪುರ್ದೂರ್ ಜಿಲ್ಲೆಯವರು.
ಅವರು ಆಗಸ್ಟ್ 2023 ರಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಬರೈಕ್ ಅವರನ್ನು ರಾಜ್ಯದಿಂದ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದ ತಮ್ಮ ಸಮುದಾಯದ ಮೊದಲ ಬುಡಕಟ್ಟು ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ಸಂಸತ್ತಿನಲ್ಲಿ ಅವರ ಅಧಿಕಾರಾವಧಿಯಲ್ಲಿ, ಅವರು ಚಹಾ ತೋಟದ ಕಾರ್ಮಿಕರಿಗೆ, ವಿಶೇಷವಾಗಿ ಅವರ ಹಕ್ಕುಗಳು, ಭವಿಷ್ಯ ನಿಧಿ (ಪಿಎಫ್) ಪ್ರಯೋಜನಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಬಗೆಗಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರು.
ದೆಹಲಿಯಲ್ಲಿದ್ದಾಗಲೇ ಮಮತಾಗೆ ಆಘಾತ ನೀಡಿದ್ದ ಸುಖೇಂದು ರಾಯ್
ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಮತ್ತು 2026ರ ಬಂಗಾಳ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಪಕ್ಷದ ಭವಿಷ್ಯದ ಕಾರ್ಯತಂತ್ರ ರೂಪಿಸಲು ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರೊಂದಿಗೆ ಸರಣಿ ಸಭೆ ನಡೆಸುತ್ತಿದ್ದರು. ಇದೇ ವೇಳೆ ಸೋಮವಾರ  ಮಮತಾ ಅವರ ಅತ್ಯಂತ ಆಪ್ತ ಒಡನಾಡಿಯಾಗಿದ್ದ ಹಾಗೂ 13 ವರ್ಷಗಳ ಕಾಲ ರಾಜ್ಯಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿದ್ದ (Chief Whip) ಸುಖೇಂದು ಶೇಖರ ರಾಯ್ ರಾಜೀನಾಮೆ ನೀಡುವ ಮೂಲಕ ಬಂಡಾಯದ ಕಿಡಿ ಹೊತ್ತಿಸಿದ್ದರು. ಬುಧವಾರ ಸುಶ್ಮಿತಾ ದೇವ್ ಮತ್ತು ಗುರುವಾರ ಬಾರೈಕ್ ರಾಜೀನಾಮೆ ನೀಡುವ ಮೂಲಕ ಈ ಬಿಕ್ಕಟ್ಟು ಮತ್ತಷ್ಟು ವಿಸ್ತರಿಸಿದೆ.
ವಿಧಾನಸಭೆಯಲ್ಲಿ  ಮಮತಾ ಕೋಟೆ ಧೂಳೀಪಟ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರ ಶಾಸಕಾಂಗ ಪಕ್ಷದ ಮೇಲಿನ ಹಿಡಿತ ಸಂಪೂರ್ಣ ಸಡಿಲಗೊಂಡಿದೆ. ಟಿಎಂಸಿಯ ಒಟ್ಟು 80 ಶಾಸಕರ ಪೈಕಿ 58 ಶಾಸಕರು  ಪಕ್ಷದಿಂದ ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರಿಗೆ ಬೆಂಬಲ ಸೂಚಿಸಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕನ್ನಾಗಿ ಮಾಡಿದ್ದಾರೆ. ಮಮತಾ ಅವರ ತೀವ್ರ ಅಸಮಾಧಾನದ ನಡುವೆಯೂ ರಿತಬ್ರತ ಬ್ಯಾನರ್ಜಿ ಅವರನ್ನು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಈಗ ಆ ಬಂಡಾಯ ಶಾಸಕರ ಸಂಖ್ಯೆ 64 ಕ್ಕೆ ಏರಿಕೆ ಎಂದು ಹೇಳಿಕೊಳ್ಳಲಾಗುತ್ತಿದೆ.  ಮುಂಬರುವ ದಿನಗಳಲ್ಲಿ ಇನ್ನಷ್ಟು ಶಾಸಕರು ತಮ್ಮ ಬಣಕ್ಕೆ ಸೇರಲಿದ್ದಾರೆ ಎಂದು ರಿತಬ್ರತ ಆಶಯ ವ್ಯಕ್ತಪಡಿಸಿದ್ದಾರೆ.
ಲೋಕಸಭೆಗೂ ಹಬ್ಬಿದ ಬಂಡಾಯದ ಕಿಚ್ಚು: ಎನ್‌ಡಿಎ ಕಡೆಗೆ 19 ಸಂಸದರ ಚಿತ್ತ !
ವಿಧಾನಸಭೆ ಮತ್ತು ರಾಜ್ಯಸಭೆಯಲ್ಲಿ ತಲ್ಲಣ ಸೃಷ್ಟಿಸಿರುವ ಈ ಬಂಡಾಯದ ಕಿಚ್ಚು ಈಗ ಲೋಕಸಭೆಗೂ ವ್ಯಾಪಿಸಿದೆ. ಬುಧವಾರ ಮಮತಾ ಬ್ಯಾನರ್ಜಿ ದೆಹಲಿ ಪ್ರವಾಸ ಮುಗಿಸಿ ಕೋಲ್ಕತ್ತಾಗೆ ಮರಳುತ್ತಿದ್ದಂತೆ, ಟಿಎಂಸಿಯ ಒಟ್ಟು 28 ಲೋಕಸಭಾ ಸಂಸದರ ಪೈಕಿ 19 ಸಂಸದರು ಮಮತಾ ಬ್ಯಾನರ್ಜಿ ಅವರಿಂದ ದೂರ ಸರಿದು ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಲು ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಈ ಬಂಡಾಯ ಸಂಸದರ ಗುಂಪು ಈಗಾಗಲೇ ಅಧಿಕೃತ ಮಾನ್ಯತೆಗಾಗಿ ಲೋಕಸಭಾ ಸ್ಪೀಕರ್ ಅವರನ್ನು ಸಂಪರ್ಕ ಮಾಡಿದೆ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಈ ಬಂಡಾಯಗಾರರ ಪಟ್ಟಿಯಲ್ಲಿ ಜಾದವಪುರ ಸಂಸದೆ ಸಾಯೋನಿ ಘೋಷ್ ಅವರ ಹೆಸರು ಇರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಏಕೆಂದರೆ, ವಿಧಾನಸಭಾ ಚುನಾವಣೆಯ ಸೋಲಿನ ನಂತರವೂ ಅವರು ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿರುವುದಾಗಿ ಘೋಷಿಸಿದ್ದರು. ಾಲ್ಲದೆ,  ಖ್ಯಾತ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮತ್ತು ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಹೆಸರುಗಳೂ ಕೂಡ ಈ ಬಂಡಾಯಗಾರರ ಪಟ್ಟಿಯಲ್ಲಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಒಟ್ಟಾರೆಯಾಗಿ, ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಶಾಸಕರು ಹಾಗೂ ಸಂಸದರು ಸಾಮೂಹಿಕವಾಗಿ ಬಂಡಾಯವೆದ್ದಿರುವುದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಭವಿಷ್ಯವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement