
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿಖಾನ್ ಹಾಗೂ ಬಿಜೆಪಿ ಅಭ್ಯರ್ಥಿಯಾದ ಎಂ.ನಾಗರಾಜ್ ಅವಿರೋಧವಾಗಿ ಆಯ್ಕೆಯಾದವರು.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಒಟ್ಟು ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಪೈಕಿ ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬೋಜಣ್ಣ ಸೋಮಣ್ಣ ಸಲ್ಲಿಸಿದ್ದ ನಾಮಪತ್ರಕ್ಕೆ ಯಾವುದೇ ಅನುಮೋದಕರ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿತ್ತು. ಹಾಗಾಗಿ ಕಣದಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಉಳಿದು ಕೊಂಡಿದ್ದರು.
ಇಂದು, ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಯಾರೂ ನಾಮಪತ್ರ ಹಿಂಪಡೆಯಲಿಲ್ಲ. ನಾಲ್ಕು ಸ್ಥಾನಗಳಿಗೆ ನಾಲ್ಕು ಪತ್ರ ಮಾತ್ರ ಇದ್ದುದರಿಂದ ನಾಲ್ವರು ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಂ. ವಿಶಾಲಾಕ್ಷಿ ತಿಳಿಸಿದ್ದಾರೆ.
ಚುನಾವಣಾಧಿಕಾರಿ ಕೆ.ಎಂ. ವಿಶಾಲಾಕ್ಷಿ ಅವಿರೋಧ ಆಯ್ಕೆಯಾಗಿರುವ ಮೂವರು ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿದ್ದಾರೆ. ಖರ್ಗೆ ಅವರು ದೆಹಲಿಯಲ್ಲಿರುವ ಕಾರಣ ಬೆಂಗಳೂರಿಗೆ ವಾಪಸ್ ಆದ ಬಳಿಕ ಪ್ರಮಾಣ ಪತ್ರ ಪಡೆದುಕೊಳ್ಳಲಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ