
ಕೋಲ್ಕತ್ತಾ/ನವದೆಹಲಿ: 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಪಕ್ಷದೊಳಗಿನ ಒಡಕನ್ನು ಇನ್ನಷ್ಟು ಹೆಚ್ಚಿಸುವ ಬೆಳವಣಿಗೆಯೊಂದರಲ್ಲಿ ಟಿಎಂಸಿಯೊಳಗೆ ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಕೋರಿ ಪಕ್ಷದ ಭಿನ್ನಮತೀಯ ಸಂಸದರ ಪಾಳಯ ಸಲ್ಲಿಸಿದ ಪತ್ರಕ್ಕೆ ಹಿರಿಯ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಪಕ್ಷದ ಹಿರಿಯ ನಾಯಕ ಸುದೀಪ ಬಂದೋಪಾಧ್ಯಾಯ ಹಾಗೂ ಸಂಸದೆ ಶತಾಬ್ದಿ ರಾಯ್ ಸೇರಿದಂತೆ ಒಟ್ಟು 19 ಲೋಕಸಭಾ ಸಂಸದರು ಬಂಡಾಯವೆದ್ದಿದ್ದಾರೆ. ಈ ಅಸಮಾಧಾನಿತ ಸಂಸದರ ಗುಂಪು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯ ನೇತೃತ್ವದ ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ನೀಡಲು ಮುಂದಾಗಿದೆ.
ಶನಿವಾರ ಹಿರಿಯ ನಾಯಕ ಸುದೀಪ ಬಂದೋಪಾಧ್ಯಾಯ ಮತ್ತು ಸಂಸದೆ ಶತಾಬ್ದಿ ರಾಯ್ ಅವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಸುದೀಪ ಬಂಡೋಪಾಧ್ಯಾಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸ್ಪೀಕರ್ ಭೇಟಿಗೆ ಸಿದ್ಧತೆ – ಪ್ರತ್ಯೇಕ ಬಣದ ಮಾನ್ಯತೆಗೆ ಬೇಡಿಕೆ:
ಬಂಡಾಯ ಸಂಸದರ ಪರವಾಗಿ ಮಾತನಾಡಿದ ಜಗದೀಶ ಚಂದ್ರ ಬರ್ಮಾ ಬಸುನಿಯಾ, “ನಾವು ಈಗಾಗಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ಪ್ರಾತಿನಿಧ್ಯವನ್ನು ಸಲ್ಲಿಸಿದ್ದೇವೆ. ಸೋಮವಾರ ( ಜೂನ್ ೧೫) ನಾವೆಲ್ಲರೂ ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ, ನಮ್ಮನ್ನು ನೈಜ ಟಿಎಂಸಿ ಸಂಸದೀಯ ಗುಂಪು ಎಂದು ಪರಿಗಣಿಸುವಂತೆ ಕೋರಿ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದೇವೆ. ಸಂಸತ್ತಿನಲ್ಲಿ ನಮಗೆ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳಲು ಮಾನ್ಯತೆ ನೀಡಬೇಕು ಹಾಗೂ ಎನ್‌ಡಿಎ ಸಂಸದರ ಜೊತೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಲಿದ್ದೇವೆ” ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಜೂನ್ 8 ರಿಂದಲೇ ಬಂಡಾಯ ಸಂಸದರ ಸಹಿ ಸಂಗ್ರಹ ಪ್ರಕ್ರಿಯೆ ಆರಂಭವಾಗಿದ್ದು, ಸದ್ಯ 19 ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ. ಸೋಮವಾರದ ಸಭೆಗೂ ಮುನ್ನ ಸುಮಾರು 20 ಸಂಸದರು ದೆಹಲಿ ತಲುಪುವ ನಿರೀಕ್ಷೆಯಿದ್ದು, ಮುಂದಿನ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ಬಂಡಾಯ ಬಣದ ನಾಯಕತ್ವ ಮತ್ತು ಸಹಿ ಹಾಕಿದವರ ವಿವರ:
ಲಭ್ಯವಿರುವ ಮಾಹಿತಿಯ ಪ್ರಕಾರ, ಲೋಕಸಭೆಯಲ್ಲಿ ಕಾಕಲಿ ಘೋಷ್ ದಸ್ತಿದಾರ್ ಅವರ ನಾಯಕತ್ವದಲ್ಲಿ ಈ ಪ್ರತ್ಯೇಕ ಸಂಸದೀಯ ಬಣವನ್ನು ರಚಿಸಲು ನಿರ್ಧರಿಸಲಾಗಿದೆ. ತಮ್ಮ ಪ್ರತ್ಯೇಕ ರಾಜಕೀಯ ಅಸ್ತಿತ್ವವನ್ನು ಕಾಯ್ದುಕೊಂಡೇ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ನೀಡುವುದಾಗಿ ಸ್ಪೀಕರ್‌ಗೆ ತಿಳಿಸಲಾಗಿದೆ ಎನ್ನಲಾದ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಕಾಕಲಿ ಘೋಷ್ ದಸ್ತಿದಾರ್, ಶತಾಬ್ದಿ ರಾಯ್, ಬಾಪಿ ಹಲ್ದಾರ್, ಶರ್ಮಿಳಾ ಸರ್ಕಾರ್, ಪ್ರಸೂನ್ ಬಂದೋಪಾಧ್ಯಾಯ, ಜಗದೀಶ ಬರ್ಮಾ ಬಸುನಿಯಾ, ಅಸಿತ್ ಕುಮಾರ ಮಲ್, ಅರೂಪ್ ಚಕ್ರವರ್ತಿ, ರಚನಾ ಬ್ಯಾನರ್ಜಿ, ಸಾಯೋನಿ ಘೋಷ್, ಖಲೀಲೂರ್ ರೆಹಮಾನ್, ಅಬು ತಾಹೇರ್ ಖಾನ್, ಯೂಸುಫ್ ಪಠಾಣ್, ಮಿತಾಲಿ ಬಾಗ್, ಮಾಲಾ ರಾಯ್, ಕಾಲಿಪದ ಸೋರೆನ್, ದೀಪಕ್ ಅಧಿಕಾರಿ, ಜೂನ್ ಮಾಲಿಯಾ ಮತ್ತು ಪಾರ್ಥ ಭೌಮಿಕ್ ಅವರ ಸಹಿಗಳಿವೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿಯಿಂದ ಈಗಾಗಲೇ ಮೂವರು ರಾಜ್ಯಸಭಾ ಸಂಸದರು ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯ ಭಾರಿ ಸೋಲಿನ ನಂತರ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ಭಿನ್ನಮತ ಈಗ ಸಂಸತ್ತಿನವರೆಗೂ ವ್ಯಾಪಿಸಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷವು ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರ ಸಾಂಸ್ಥಿಕ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ