ಜಿಲ್ಲಾ ನ್ಯಾಯಾಲಯಕ್ಕೆ ನುಗ್ಗಿ ನ್ಯಾಯಾಧೀಶರ ಕುರ್ಚಿ ಮೇಲೆ ಕುಳಿತು ‘ಆರ್ಡರ್, ಆರ್ಡರ್’ ಎಂದು ಕೂಗಿದ ಮಹಿಳೆ

ವಾರಾಣಸಿ: ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಮಧ್ಯವಯಸ್ಕ ಮಹಿಳೆಯೊಬ್ಬಳು ದಿಢೀರನೆ ನ್ಯಾಯಾಲಯದ ಕೊಠಡಿಗೆ ನುಗ್ಗಿ,  ಜಿಲ್ಲಾ ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು ತಾನೇ ಜಡ್ಜ್ ಎಂದು ಹೇಳಿಕೊಳ್ಳುವ ಮೂಲಕ ಇಡೀ ನ್ಯಾಯಾಲಯದಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅದರಲ್ಲಿ ಮಹಿಳೆಯು ನ್ಯಾಯಾಧೀಶರ ಆಸನದಲ್ಲಿ ಕುಳಿತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳು ವರದಿ ಮಾಡಿರುವಂತೆ, ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತ ಮಹಿಳೆಯು ತಾನೇ ವಿಚಾರಣೆ ನಡೆಸಲು ಮುಂದಾಗಿದ್ದಾಳೆ. ಮೇಜಿನ ಮೇಲಿದ್ದ ಹ್ಯಾಮರ್ (ಗಾವೆಲ್-ನ್ಯಾಯಾಧೀಶರ ಸುತ್ತಿಗೆ) ಕೈಗೆತ್ತಿಕೊಂಡು, ಜೋರಾಗಿ ಮೇಜಿಗೆ ಬಡಿಯುತ್ತಾ, “ಆರ್ಡರ್, ಆರ್ಡರ್!… ಇವತ್ತು ನಾನೇ ಜಿಲ್ಲಾ ನ್ಯಾಯಾಧೀಶ. ಸಾಕ್ಷಿ ಮತ್ತು ಪುರಾವೆಗಳನ್ನು ನನ್ನ ಮುಂದೆ ಮಂಡಿಸಿ!” ಎಂದು ಜೋರಾಗಿ ಹೇಳಿದ್ದಾಳೆ.
ಒಂದು ಗಂಟೆಗಳ ಕಾಲ ಹೈಡ್ರಾಮಾ:
ನ್ಯಾಯಾಲಯದ ಕೊಠಡಿಯೊಳಗೆ ಈ ಹೈಡ್ರಾಮಾ ಸುಮಾರು ಒಂದು ಗಂಟೆಯ ಕಾಲ ಮುಂದುವರಿದಿದೆ. ಕೊನೆಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಕಾಂಟ್ (Cantt) ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಸೇರಿದಂತೆ ಪೊಲೀಸರು ಆಕೆಯನ್ನು ಕುರ್ಚಿಯಿಂದ ಕೆಳಗಿಳಿಸಿ, ಮುಂದಿನ ವಿಚಾರಣೆ ನಡೆಸಿದ್ದಾರೆ.
ಮಾನಸಿಕ ಅಸ್ವಸ್ಥತೆ…?
ಮಹಿಳೆಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸ್ ಅಧಿಕಾರಿಗಳು, ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದೆ, ತದನಂತರ ಆಕೆಯನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ (ADJ) ಯಜುವೇಂದ್ರ ವಿಕ್ರಂ ಸಿಂಗ್ ಅವರು ರಜೆಯಲ್ಲಿದ್ದರು. ನ್ಯಾಯಾಲಯದ ಕೊಠಡಿಯೊಳಗೆ ನುಗ್ಗಿದ ಮಹಿಳೆಯು, ಮೊದಲು ಅಲ್ಲಿನ ಸಿಬ್ಬಂದಿ ಬಳಿ “ನ್ಯಾಯಾಧೀಶರು ಸಾಮಾನ್ಯವಾಗಿ ಎಷ್ಟು ಗಂಟೆಗೆ ಬರುತ್ತಾರೆ?” ಎಂದು ವಿಚಾರಿಸಿದ್ದಾಳೆ. ಆ ತಕ್ಷಣವೇ ವೇದಿಕೆಯತ್ತ (ಡೈಸ್) ಹೆಜ್ಜೆ ಹಾಕಿ ನೇರವಾಗಿ ನ್ಯಾಯಾಧೀಶರ ಕುರ್ಚಿಯಲ್ಲಿ ಆಸೀನಳಾಗಿದ್ದಾಳೆ. ಅಷ್ಟೇ ಅಲ್ಲದೆ, ಮೇಜಿನ ಮೇಲಿದ್ದ ಪ್ರಕರಣದ ಕಡತಗಳನ್ನು (ಕೇಸ್ ಫೈಲ್ಸ್)ತಿರುವಿ ಹಾಕಲು ಪ್ರಾರಂಭಿಸಿದ್ದಾಳೆ.
ಈ ವೇಳೆ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಆಕೆಯನ್ನು ಸಮಾಧಾನಪಡಿಸಿ ಕುರ್ಚಿಯಿಂದ ಕೆಳಗಿಳಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ತನ್ನ ಬಳಿ ಬರಲು ಯತ್ನಿಸಿದ ಪ್ರತಿಯೊಬ್ಬರ ಮೇಲೂ ಆಕೆ ಕಿರುಚಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಪೊಲೀಸರು ಮಹಿಳೆಯನ್ನು ಕರೆದೊಯ್ದು ನ್ಯಾಯಾಲಯದ ಕೊಠಡಿಯಿಂದ ಅವರನ್ನು ಸ್ಥಳಾಂತರಿಸಿದ ನಂತರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಯಜುವೇಂದ್ರ ವಿಕ್ರಂ ಸಿಂಗ್ ಅವರು ಕೊಠಡಿಯನ್ನು ಪರಿಶೀಲಿಸಿದರು. ನ್ಯಾಯಾಲಯದ ಆವರಣದೊಳಗೆ ಇಷ್ಟೊಂದು ಕಟ್ಟುನಿಟ್ಟಿನ ಭದ್ರತೆಯಿದ್ದರೂ, ಮಹಿಳೆ ಅದನ್ನು ಮೀರಿ ನ್ಯಾಯಾಲಯದ ಕೊಠಡಿಯೊಳಗೆ ಹೇಗೆ ಪ್ರವೇಶಿಸಿದಳು? ಎಂಬ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು,  ತನಿಖೆಗೆ ಆದೇಶಿಸಿದ್ದಾರೆ, ಅಲ್ಲದೆ, ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಅಧಿಕಾರಿಗಳಿಂದ ಲಿಖಿತ ವಿವರಣೆಯನ್ನು ಕೇಳಿದ್ದಾರೆ ಎಂದು ಲೈವ್‌ ಲಾ ವರದಿ ಮಾಡಿದೆ.
ಸ್ಥಳೀಯ ವಕೀಲರ ಪ್ರಕಾರ, ಈ ಮಹಿಳೆ ಈ ಹಿಂದೆಯೂ ಒಮ್ಮೆ ಇದೇ ರೀತಿ ನ್ಯಾಯಾಧೀಶರ ಕುರ್ಚಿಯಲ್ಲಿ ಬಂದು ಕುಳಿತುಕೊಂಡು ಗದ್ದಲ ಸೃಷ್ಟಿಸಿದ್ದಳು ಎನ್ನಲಾಗಿದೆ. ನ್ಯಾಯಾಲಯದ ಅತ್ಯಂತ ಸುರಕ್ಷಿತ ವಲಯದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಮತ್ತು ನ್ಯಾಯಾಂಗ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement