
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಕಾನೂನಾತ್ಮಕ ಸ್ಥಾನಮಾನ, ಸಾಂಸ್ಥಿಕ ರಚನೆ ಹಾಗೂ ಆರ್ಥಿಕ ಮೂಲಗಳನ್ನು ಬಹಿರಂಗಪಡಿಸಬೇಕು ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸುವುದರ ಜೊತೆಗೆ ಅದರ ಕಾನೂನು ಸ್ಥಿತಿ, ಸಾಂಸ್ಥಿಕ ರಚನೆ, ಹಣಕಾಸಿನ ಮೂಲಗಳು ಮತ್ತು ಭಾರತೀಯ ಕಾನೂನುಗಳ ಅನುಸರಣೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದ್ದಾರೆ.
ಜೂನ್ 13 ರಂದು ಆರ್ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ್ ಅವರಿಗೆ ಪತ್ರ ಬರೆದಿರುವ ಸಚಿವರು, “ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯವನ್ನು ನಿರಂತರವಾಗಿ ಪ್ರತಿಪಾದಿಸುವ ಸಂಘಟನೆಯು ಪಾರದರ್ಶಕತೆ, ಕಾನೂನು ಪಾಲನೆ ಮತ್ತು ಭಾರತದ ಸಂವಿಧಾನದ ಮೇಲಿನ ಗೌರವದ ಮೂಲಕ ಈ ಮೌಲ್ಯಗಳನ್ನು ಪ್ರದರ್ಶಿಸಬೇಕು” ಎಂದು ಖರ್ಗೆ ಹೇಳಿದ್ದಾರೆ. ಅಲ್ಲದೆ, ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಘಟನೆಯು ತನ್ನ ಗಾತ್ರ ಅಥವಾ ಪ್ರಭಾವದ ಹೊರತಾಗಿಯೂ ಸಾರ್ವಜನಿಕ ಉತ್ತರದಾಯಿತ್ವದಿಂದ ಹೊರಗುಳಿಯಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬಿಡುಗಡೆ ಮಾಡಿರುವ ಆರ್‌ಎಸ್‌ಎಸ್ 2025-26ರ ವಾರ್ಷಿಕ ವರದಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಖರ್ಗೆ, ಕರ್ನಾಟಕದಲ್ಲಿ ಸಂಘಟನೆಯು ಹೊಂದಿರುವ ಬೃಹತ್ ಜಾಲವನ್ನು ಆರ್‌ಎಸ್‌ಎಸ್ ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಸೇರುವಿಕೆಗಳು ಮತ್ತು 60 ಮಾಸಿಕ ಮಂಡಳಿಗಳನ್ನು ಹೊಂದುವ ಮೂಲಕ ಸಂಘಟನೆಯು ಭಾರಿ ಹೆಜ್ಜೆಗುರುತನ್ನು ಹೊಂದಿದೆ. ಎಂದು ಅವರು ತಿಳಿಸಿದ್ದಾರೆ.
ವರದಿಯ ಪ್ರಕಾರ ,ಆರ್‌ಎಸ್‌ಎಸ್ ರಾಜ್ಯದಲ್ಲಿ 2,194 ಸಮಾಜೋತ್ಸವಗಳನ್ನು ಆಯೋಜಿಸಿದ್ದು, ಅದರಲ್ಲಿ 19.6 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಹಾಗೆಯೇ, 2.21 ಲಕ್ಷಕ್ಕೂ ಅಧಿಕ ಸಮವಸ್ತ್ರಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದ 562 ಪಥಸಂಚಲನಗಳನ್ನು (ರೂಟ್ ಮಾರ್ಚ್) ನಡೆಸಲಾಗಿದೆ. ಸಾರ್ವಜನಿಕ ಸಜ್ಜುಗೊಳಿಸುವಿಕೆ, ಪಥಸಂಚಲನ ಹಾಗೂ ಜನಾಂದೋಲನಗಳನ್ನು ಒಳಗೊಂಡಿರುವ ಇಷ್ಟೊಂದು ದೊಡ್ಡ ಸಾಂಸ್ಥಿಕ ಜಾಲವು ಅದರ ಕಾನೂನು ಸ್ಥಾನಮಾನ, ಆರ್ಥಿಕ ಪಾರದರ್ಶಕತೆ, ನಿಧಿ ಸಂಗ್ರಹದ ಮೂಲಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆಯುವ ಅನುಮತಿಗಳ ಕುರಿತು ಕಾನೂನುಬದ್ಧ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಪ್ರಮುಖ ಸ್ಪಷ್ಟನೆಗಳನ್ನು ನೀಡಲು ಒತ್ತಾಯ
ಈ ಕುರಿತು ಸ್ಪಷ್ಟನೆ ಕೋರಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಕೆಲವು ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘಟನೆಯ ಕಾನೂನಾತ್ಮಕ ಮತ್ತು ಸಾಂಸ್ಥಿಕ ರಚನೆ, ಪದಾಧಿಕಾರಿಗಳ ವಿವರ ಹಾಗೂ ದೇಣಿಗೆ ಮತ್ತು ಆದಾಯದ ಮೂಲಗಳು, ಒಟ್ಟು ವೆಚ್ಚ, ಆಸ್ತಿಪಾಸ್ತಿಗಳು ಹಾಗೂ ತೆರಿಗೆ ಪಾವತಿಯ ವಿವರಗಳು, ಯಾವುದೇ ಕಾನೂನು ಘಟಕವಾಗಿ ಔಪಚಾರಿಕ ನೋಂದಣಿ ಇಲ್ಲದೆ ಚಟುವಟಿಕೆಗಳನ್ನು ನಡೆಸಲು ಇರುವ ಕಾನೂನಾತ್ಮಕ ಆಧಾರ, ಸಂಘಟನೆ ಕಾರ್ಯನಿರ್ವಹಿಸುತ್ತಿರುವ ಸಾಂವಿಧಾನಿಕ ಮತ್ತು ಶಾಸನಬದ್ಧ ಚೌಕಟ್ಟು, ಸಾರ್ವಜನಿಕ ಕಾರ್ಯಕ್ರಮಗಳು, ಬೃಹತ್ ಸಮಾವೇಶಗಳು ಮತ್ತು ಪಥಸಂಚಲನಗಳನ್ನು ನಡೆಸುವಾಗ ಅನುಸರಿಸಲಾಗುವ ಅನುಮತಿ ಹಾಗೂ ನಿಯಮಗಳ ಪಾಲನಾ ವ್ಯವಸ್ಥೆ ಈ ಬಗ್ಗೆ ವಿವರಗಳನ್ನು ನಿಡಬೇಕು ಎಂದು ಒತ್ತಾಯಿಸಿದ್ದಾರೆ.
“ಭಾರತದಲ್ಲಿ ಧಾರ್ಮಿಕ ಸಂಸ್ಥೆಗಳು, ಚಾರಿಟೇಬಲ್ ಟ್ರಸ್ಟ್‌ಗಳು, ಎನ್‌ಜಿಒಗಳು, ಸಂಘಗಳು ಮತ್ತು ಕಂಪನಿಗಳು ತಮ್ಮ ಚಟುವಟಿಕೆಗಳು, ಹಣಕಾಸು ಮತ್ತು ಸಾಂಸ್ಥಿಕ ರಚನೆಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಹಾಗಿರುವಾಗ ಆರ್ಎಸ್ಎಸ್ ಕೂಡ ಇದೇ ಮಾನದಂಡಗಳನ್ನು ಪಾಲಿಸುವುದು ನ್ಯಾಯೋಚಿತ ” ಎಂದು ಖರ್ಗೆ ಹೇಳಿದ್ದಾರೆ.
ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ವರ್ಷವನ್ನು ‘ಸಾಂವಿಧಾನಿಕ ಆತ್ಮಾವಲೋಕನ’ಕ್ಕೆ ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂಘಟನೆಯು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಹಣಕಾಸು ಮತ್ತು ಚಟುವಟಿಕೆಗಳನ್ನು ಬಹಿರಂಗಪಡಿಸಬೇಕು, ಅನ್ವಯಿಸುವ ಎಲ್ಲಾ ತೆರಿಗೆಗಳನ್ನು ಪಾವತಿಸಬೇಕು ಮತ್ತು ಪಾರದರ್ಶಕ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ವಿಷಯಗಳ ಕುರಿತು ಚರ್ಚಿಸಲು ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಿರುವ ಖರ್ಗೆ, ಆರ್‌ಎಸ್‌ಎಸ್ ಔಪಚಾರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ