
ಮಂಗಳೂರು : ಧರ್ಮಸ್ಥಳ ಗ್ರಾಮದ ವಿವಾದಿತ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾರ್ಮಾಡಿ ಘಾಟಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಅಧಿಕಾರಿಗಳ ತಂಡವು ಚಿಕ್ಕಮಗಳೂರಿಗೆ ಹೊರಟಿತ್ತು. ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿ ಮಾಡಿ, ತನಿಖೆಯ ಪ್ರಗತಿ ಕುರಿತು ಚರ್ಚಿಸಲು ಅಧಿಕಾರಿಗಳು ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ, ಪೊಲೀಸ್ ಸಿಬ್ಬಂದಿ (ಪಿಸಿ) ಮಂಜುನಾಥ ಹಾಗೂ ಕಾರಿನ ಚಾಲಕ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಚಾರ್ಮಾಡಿ ಘಾಟ್ ರಸ್ತೆಯ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೊವಾ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ