
ನವದೆಹಲಿ: ಮುಂಬರುವ ನೀಟ್ (NEET UG 2026) ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಯಾವುದೇ ರೀತಿಯ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ದೇಶಾದ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ಆದ ಟೆಲಿಗ್ರಾಂ (Telegram) ಅನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರವು ನಿರ್ಬಂಧಿಸಿದೆ. ಜೂನ್ 21 ರಂದು ನೀಟ್ ಮರುಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಗೌಪ್ಯತೆ ಕಾಯ್ದುಕೊಳ್ಳಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಆದೇಶ ಹೊರಡಿಸಿದೆ. ಈ ನಿರ್ಬಂಧವು ಕೇವಲ ಪರೀಕ್ಷಾ ಅವಧಿ ಮತ್ತು ಅದರ ಬೆನ್ನಲ್ಲೇ ಬರುವ ಕೆಲವು ದಿನಗಳವರೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಜೂನ್ 30ರವರೆಗೆ ‘ಮೆಸೇಜ್ ಎಡಿಟಿಂಗ್’ ಫೀಚರ್ ಬಂದ್
ಕೇವಲ ಆ್ಯಪ್ ನಿರ್ಬಂಧಿಸುವುದು ಮಾತ್ರವಲ್ಲದೆ, ಜೂನ್ 30ರವರೆಗೆ ಭಾರತದಲ್ಲಿ ಟೆಲಿಗ್ರಾಂನ ‘ಮೆಸೇಜ್-ಎಡಿಟಿಂಗ್’ (Message-Editing) ವೈಶಿಷ್ಟ್ಯವನ್ನು ಸಹ ನಿಷ್ಕ್ರಿಯಗೊಳಿಸುವಂತೆ ಸರ್ಕಾರ ಸೂಚಿಸಿದೆ.ಇದಕ್ಕೆ ಕಾರಣವೇನು?
ಎನ್‌ಟಿಎ ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಚಾನೆಲ್ ಅಡ್ಮಿನ್‌ಗಳು ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ಮೂಲ ಸಮಯದ ಮುದ್ರೆ (Timestamp) ಬದಲಾಗದಂತೆ ಪಿಡಿಎಫ್ (PDF) ಸೇರಿದಂತೆ ಇತರ ಫೈಲ್‌ಗಳನ್ನು ಬದಲಾಯಿಸುತ್ತಿದ್ದರು. ಪರೀಕ್ಷೆ ಮುಗಿದ ನಂತರ, ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ ಪ್ರಶ್ನೆಪತ್ರಿಕೆ ಮುಂಚಿತವಾಗಿಯೇ ಸೋರಿಕೆಯಾಗಿದೆ ಎಂಬಂತೆ ಬಿಂಬಿಸಿ, ನಕಲಿ “ಪೇಪರ್ ಲೀಕ್” ಪುರಾವೆಗಳನ್ನು ಸೃಷ್ಟಿಸಲು ಈ ಫೀಚರ್ ಅನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗಿತ್ತು.
ವಂಚಕರ ಜಾಲಕ್ಕೆ ಬ್ರೇಕ್
ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಅಭ್ಯರ್ಥಿಗಳನ್ನು ಗುರಿಯಾಗಿಸಿ ಟೆಲಿಗ್ರಾಂನಲ್ಲಿ ಸಕ್ರಿಯವಾಗಿದ್ದ ಸಂಘಟಿತ ಚೀಟಿಂಗ್ ಜಾಲಗಳನ್ನು ಮಟ್ಟಹಾಕಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಎನ್‌ಟಿಎ ತಿಳಿಸಿದೆ.
“ಸಾರ್ವಜನಿಕ ಹಿತಾಸಕ್ತಿ ಮತ್ತು ಪರೀಕ್ಷೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ಎರಡೂ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ,” ಎಂದು ಎನ್‌ಟಿಎ ಹೇಳಿದೆ.
ಈಗಾಗಲೇ ನಕಲಿ ಪ್ರಶ್ನೆಪತ್ರಿಕೆ ನೀಡುವುದಾಗಿ ಹಕ್ಕು ಸಾಧಿಸುತ್ತಿದ್ದ ಹಲವಾರು ಟೆಲಿಗ್ರಾಂ ಚಾನೆಲ್‌ಗಳು, ಗ್ರೂಪ್‌ಗಳು ಮತ್ತು ಬಾಟ್‌ಗಳನ್ನು (Bots) ಅಧಿಕಾರಿಗಳು ಪತ್ತೆಹಚ್ಚಿ ಅಳಿಸಿಹಾಕಿದ್ದಾರೆ. ಆದರೆ, ಇಂತಹ ಮಧ್ಯಂತರ ಕ್ರಮಗಳು ಸಾಕಾಗದೇ ಇದ್ದುದರಿಂದ ಪ್ಲಾಟ್‌ಫಾರ್ಮ್ ಮಟ್ಟದಲ್ಲೇ ಮಧ್ಯಪ್ರವೇಶ ಮಾಡುವುದು ಅನಿವಾರ್ಯವಾಯಿತು ಎಂದು ಸಂಸ್ಥೆ ವಿವರಿಸಿದೆ.
ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದರು…
ಟೆಲಿಗ್ರಾಂನಲ್ಲಿ ಸಕ್ರಿಯವಾಗಿದ್ದ ಕೆಲವು ಚಾನೆಲ್‌ಗಳು “PAPER LEAKED NEET”, “Re-NEET 2026” ಮತ್ತು “Private Mafia” ಎಂಬ ಹೆಸರುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಇವು ನೀಟ್ ಪ್ರಶ್ನೆಪತ್ರಿಕೆ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಕೆಲವು ಸಾವಿರ ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದವು.
ಸಾರ್ವಜನಿಕರ ಅನಾನುಕೂಲಕ್ಕೆ ಎನ್‌ಟಿಎ ವಿಷಾದ
ಟೆಲಿಗ್ರಾಂ ಅನ್ನು ಶಿಕ್ಷಣ, ವೃತ್ತಿಪರ, ವೈಯಕ್ತಿಕ ಮತ್ತು ಮಾಹಿತಿ ಹಂಚಿಕೆಗಾಗಿ ಬಳಸುವ ದೇಶದ ಲಕ್ಷಾಂತರ ಕಾನೂನುಬದ್ಧ ಬಳಕೆದಾರರಿಗೆ ಈ ತಾತ್ಕಾಲಿಕ ನಿಷೇಧದಿಂದ ತೊಂದರೆಯಾಗಲಿದೆ ಎಂಬುದನ್ನು ಒಪ್ಪಿಕೊಂಡಿರುವ ಎನ್‌ಟಿಎ, ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲಕ್ಕೆ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸಿದೆ. ಆದರೆ, ದೇಶದ ಅತ್ಯಂತ ಪ್ರಮುಖ ಪ್ರವೇಶ ಪರೀಕ್ಷೆಯೊಂದರ ಪಾವಿತ್ರ್ಯತೆಯನ್ನು ರಕ್ಷಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದೆ.
ನೀಟ್ ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಟೆಲಿಗ್ರಾಂ ತೀವ್ರ ನಿಗಾದಲ್ಲಿತ್ತು. ಪರೀಕ್ಷಾ ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದಿನ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಈಗ ಜೂನ್ 21 ರಂದು ಮರುಪರೀಕ್ಷೆ (Re-NEET) ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ