ಪೋಕ್ಸೊ ಪ್ರಕರಣ | ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಹೈಕೋರ್ಟ್ ಮಂಗಳವಾರ ಆಘಾತ ವ್ಯಕ್ತಪಡಿಸಿದೆ.
ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ 2026ರ ಮೇ 6ರಂದು ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪೋಕ್ಸೊ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿತು. ಜಾಮೀನು ಪಡೆದಿರುವ ಆರೋಪಿಯ ವಾದ ಆಲಿಸದೆ ಯಾವುದೇ ಆದೇಶ ಹೊರಡಿಸಲಾಗದು ಎಂದು ಅಭಿಪ್ರಾಯಪಟ್ಟು ಆರೋಪಿ ವಚನಾನಂದ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆನ್ನು ಜೂನ್ 23ಕ್ಕೆ ಮುಂದೂಡಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶದ 14ನೇ ಪ್ಯಾರಾ ಗಮನಿಸಬೇಕು. ಜಾಮೀನು ಮಂಜೂರು ಮಾಡಿರುವ ವಿಧಾನ ನಿಜಕ್ಕೂ ಆಘಾತಕಾರಿಯಾಗಿದೆ ಎಂದರು. ಈ ವೇಳೆ ಪೀಠವು ಇದು ಆಘಾತಕಾರಿ. ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಈ ರೀತಿಯಾಗಬಾರದು, ನಿರೀಕ್ಷಣಾ ಜಾಮೀ‌ನು ನೀಡುವ ಪ್ರಶ್ನೆಯೇ ಇರುವುದಿಲ್ಲ ಎಂದು ಹೇಳಿತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಓದಿದ ರವಿಶಂಕರ, ಮಠದ ಟ್ರಸ್ಟಿಗಳು, ಅವರ ಸಹವರ್ತಿಗಳು, ಭಕ್ತರು, ಮಕ್ಕಳು ಅಥವಾ ಅವರ ಪೋಷಕರು ನೀಡುವ ಯಾವುದೇ ದೂರು ಅಥವಾ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4, 6, 8, 10 ಮತ್ತು 12 ಅಥವಾ ಸಂಬಂಧಿತ ನಿಬಂಧನೆಗಳ ಅಡಿ ಎಫ್‌ಐಆರ್‌ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಿದರೆ ಅವರಿಂದ 1 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಅದಕ್ಕೆ ನ್ಯಾಯಮೂರ್ತಿಗಳು, ಈ ರೀತಿಯ ಆದೇಶ ನೀಡಿರುವುದು ಆಘಾತಕಾರಿ. ನನಗೂ ಆಘಾತವಾಗಿದೆ. ಆದರೆ, ಅವರ ವಾದ ಆಲಿಸದೆ ಆದೇಶ ಮಾಡಲಾಗದು ಎಂದರು‌ ಎಂದು ಬಾರ್‌ & ಬೆಂಚ್‌ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಧರ್ಮಸ್ಥಳ ಪ್ರಕರಣದ ತನಿಖಾ ತಂಡದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ

ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇನ್ನಿತರ ಶಿಕ್ಷಾರ್ಹ ಅಪರಾಧವೆಸಗಿದ ಆರೋಪವಿದ್ದು, ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಆರೋಪಿಗೆ ಮಂಜೂರು ಮಾಡಿರುವುದು ಎಫ್ಐಆರ್ ಪೂರ್ವ ಜಾಮೀನಾಗಿದೆ. ಅಂದರೆ, ದೂರು ಹಾಗೂ ಎಫ್ಐಆರ್ ದಾಖಲಾಗುವ ಮುನ್ನ ಜಾಮೀನು ನೀಡಲಾಗಿದೆ. ಮೇಲ್ನೋಟಕ್ಕೆ, ಈ ರೀತಿ ಜಾಮೀನು ಮಂಜೂರು ಮಾಡಬಾರದಿತ್ತು. ಆದರೆ, ಜಾಮೀನು ಆದೇಶದ ಫಲಾನುಭವಿಯ ಅಹವಾಲು ಆಲಿಸದೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಅರ್ಜಿಯ ಮುಂದಿನ ವಿಚಾರಣೆ ದಿನಾಂಕದೊಳಗೆ ಪೊಲೀಸರು ಆರೋಪಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಆದೇಶಿಸಿದ ಪೀಠ, ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ (ಜೂನ್ 23ಕ್ಕೆ) ಮುಂದೂಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement