
ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ದೊಡ್ಡ ಹಿನ್ನಡೆಯಲ್ಲಿ ದೆಹಲಿಯಲ್ಲಿ ಗುರುವಾರ ನಡೆದ ಶಿವಸೇನಾ (ಯುಬಿಟಿ) ಪಕ್ಷದ ಮಹತ್ವದ ಸಂಸದೀಯ ಸಭೆಗೆ ಒಂಬತ್ತು ಲೋಕಸಭಾ ಸಂಸದರ ಪೈಕಿ ಕೇವಲ ಮೂವರು ಮಾತ್ರ ಹಾಜರಾಗಿದ್ದಾರೆ. ಹೀಗಾಗಿ ಅವರು ಏಕನಾಥ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆ ಸೇರ್ಪಡೆಯಾಗುವ ಸಾಧ್ಯತೆ ವದಂತಿಗಳಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಬಂದಿವೆ. ಈ ಸಭೆಯಿಂದ ದೂರ ಉಳಿದ ಆರು ಸಂಸದರ ವಿರುದ್ಧ ಶಿಸ್ತುಕ್ರಮ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸಂಜಯ ರಾವುತ್ ಎಚ್ಚರಿಕೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದಿಂದ ಸಂಸದರು ಪಕ್ಷಾಂತರ ಮಾಡಬಹುದು ಎಂಬ ತೀವ್ರ ವದಂತಿಗಳ ನಡುವೆಯೇ, ಶಿವಸೇನಾ (ಯುಬಿಟಿ) ಲೋಕಸಭೆಯ ನಾಯಕ ಅರವಿಂದ ಸಾವಂತ್ ಮತ್ತು ಮುಖ್ಯ ಸಚೇತಕ (ಚೀಫ್ ವಿಪ್) ಅನಿಲ್ ದೇಸಾಯಿ ಈ ಸಭೆಯನ್ನು ಕರೆದಿದ್ದರು. ಆದರೆ, ಸಭೆಗೆ ಕೇವಲ ಅರವಿಂದ ಸಾವಂತ್, ರಾಜಾಭಾವ್ ವಜೆ ಮತ್ತು ಅನಿಲ ದೇಸಾಯಿ ಮಾತ್ರ ಹಾಜರಾಗಿದ್ದರು. ಉಳಿದ ಆರು ಸಂಸದರಾದ ನಾಗೇಶ ಆಶ್ತಿಕರ್, ಸಂಜಯ ದೇಶಮುಖ್, ಸಂಜಯ ಜಾಧವ್, ಸಂಜಯ ದಿನಾ ಪಾಟೀಲ್, ಓಂಪ್ರಕಾಶ ರಾಜೇ ನಿಂಬಾಳ್ಕರ್ ಮತ್ತು ಭೌಸಾಹೇಬ ವಾಕ್ಚೌರೆ ಅವರು ಸಭೆಗೆ ಗೈರಾಗಿದ್ದಾರೆ.
ಈ ಆರು ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ
ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಆರು ಸಂಸದರು ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳಲು ಕೋರುವ ಪತ್ರಕ್ಕೆ ಸಹಿ ಹಾಕಿದ್ದು, ಅದನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಯ ರಾವುತ್, “ಸಭೆಗೆ ಉಳಿದ ಆರು ಸಂಸದರ ಗೈರಾಗಿದ್ದನ್ನು ಪಕ್ಷದ ಶಿಸ್ತು ಮತ್ತು ಪಕ್ಷದ ವಿಪ್ ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಲಾಗಿದೆ. ನಮ್ಮ ಲೋಕಸಭಾ ನಾಯಕರಾದ ಅರವಿಂದ ಸಾವಂತ್ ಮತ್ತು ಸಂಸದ ಅನಿಲ ದೇಸಾಯಿ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸದರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕೇವಲ ಮೂವರು ಲೋಕಸಭಾ ಸಂಸದರು ಮಾತ್ರ ಉಪಸ್ಥಿತರಿದ್ದರು. ಗೈರಾದ ಆರು ಸಂಸದರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇದನ್ನು ಪಕ್ಷದ ಶಿಸ್ತು ಎಂದು ಒಪ್ಪಲು ಸಾಧ್ಯವಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ,” ಎಂದು ಸ್ಪಷ್ಟಪಡಿಸಿದರು.
“ಮೊದಲ ಹಂತವಾಗಿ ಗೈರಾದ ಸಂಸದರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು. ಅವರ ಉತ್ತರಗಳನ್ನು ಪರಿಶೀಲಿಸಿದ ಬಳಿಕ, ಸಂಸತ್ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸುವಂತೆ ಕೋರಿ ಕಾನೂನು ಕ್ರಮದ ದಿಕ್ಕಿನಲ್ಲಿ ಮುನ್ನಡೆಯಲಿದ್ದೇವೆ,” ಎಂದರು.
ಸಭೆಗೆ ಬಾರದೆ ಅಸಹಕಾರ ತೋರಿದ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾವುತ್, “ಅವರನ್ನು ನಾವು ದ್ರೋಹಿಗಳು, ಅಪ್ರಾಮಾಣಿಕರು ಮತ್ತು ವಂಚಕರು ಎಂದು ಕರೆಯುತ್ತೇವೆ. ನೀವು ಇಂದಿಗೂ ಪಕ್ಷದ ಸದಸ್ಯರಾಗಿದ್ದೀರಿ. ನಮ್ಮ ಪಕ್ಷದ ಹೆಸರು ಮತ್ತು ಚಿಹ್ನೆಯಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೀರಿ. ಹೀಗಿರುವಾಗ ಪಕ್ಷದ ವಿಪ್ ಉಲ್ಲಂಘಿಸಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ, ಗೈರಾದ ಸಂಸದರು ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳನ್ನು ಪ್ರಶ್ನಿಸಿದ ರಾವುತ್, “ನಾವು ನಿನ್ನೆ ಸ್ಪೀಕರ್ ಅವರನ್ನು ಬಹಿರಂಗವಾಗಿ ಭೇಟಿಯಾಗಿದ್ದೆವು ಮತ್ತು ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾರ್ವಜನಿಕ ವಲಯದಲ್ಲಿವೆ. ಒಂದು ವೇಳೆ ಉಳಿದ ಆರು ಸಂಸದರು ಸ್ಪೀಕರ್ ಅವರನ್ನು ಭೇಟಿಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ಫೋಟೋವನ್ನು ತೋರಿಸಲಿ. ಇದನ್ನೇನೂ ರಾಜಕೀಯ ತಂತ್ರಗಾರಿಕೆ ಎನ್ನಲಾಗುವುದಿಲ್ಲ, ಇದು ಶುದ್ಧ ದ್ರೋಹ,” ಎಂದು ಕಿಡಿಕಾರಿದರು.



ನಿಮ್ಮ ಕಾಮೆಂಟ್ ಬರೆಯಿರಿ