
ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ಬ್ಯಾಂಕ್ ಖಾತೆಗಳನ್ನು ಫ್ರೀಜ್ (ಸ್ಥಗಿತ) ಮಾಡುವ ಹಂತಕ್ಕೆ ಬಂದು ತಲುಪಿದೆ. ಪಕ್ಷದ ಹಿರಿಯ ನಾಯಕ ಅರೂಪ ಬಿಸ್ವಾಸ್, ಪಕ್ಷದ ಎಲ್ಲಾ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆಎಚ್ಡಿಎಫ್ಸಿ ಬ್ಯಾಂಕಿಗೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ. ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಹೊಸ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.
ವರದಿಗಳ ಪ್ರಕಾರ, ಪಕ್ಷದ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಬಿಸ್ವಾಸ್, ಪಕ್ಷಕ್ಕೆ ಸಂಬಂಧಿಸಿದ ಹಣಕಾಸು ವಹಿವಾಟುಗಳನ್ನು ತಕ್ಷಣವೇ ಅಮಾನತಿನಲ್ಲಿಡುವಂತೆ ಕೋರಿ ಎಚ್ಡಿಎಫ್ಸಿ (HDFC) ಬ್ಯಾಂಕ್ಗೆ ಪತ್ರ ಬರೆದಿದ್ದಾರೆ. ಪಕ್ಷದ ವ್ಯವಹಾರಗಳ ಮೇಲಿನ ನಿಯಂತ್ರಣ ಮತ್ತು ಅಧಿಕಾರದ ವಿಷಯದಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ಮೂಡಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷದ ನಾಯಕತ್ವದ ವಿವಾದ ಬಗೆಹರಿಯುವವರೆಗೆ ಬ್ಯಾಂಕ್ ಖಾತೆಗಳ ಯಥಾಸ್ಥಿತಿಯನ್ನು (status quo) ಕಾಯ್ದುಕೊಳ್ಳಬೇಕು. ಖಾತೆಗಳಿಂದ ಯಾವುದೇ ರೀತಿಯ ಹಣ ವರ್ಗಾವಣೆ, ಡೆಬಿಟ್ ವ್ಯವಹಾರಗಳು ಮತ್ತು ಆಪರೇಷನಲ್ ಮ್ಯಾಂಡೇಟ್ ಬದಲಾವಣೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಅವರು ಕೋರಿದ್ದಾರೆ.
ಅರೂಪ್ ಬಿಸ್ವಾಸ್ ಅವರ ಪತ್ರವು ಮತ್ತೊಂದು ಗಂಭೀರ ವಿಚಾರವನ್ನು ಹೊರಹಾಕಿದೆ. ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗಾಗಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಈಗಾಗಲೇ ಸಹಿ ಮಾಡಿ ಸಿದ್ಧವಾಗಿಟ್ಟುಕೊಂಡಿದ್ದ ಹಲವು ‘ಪ್ರಿ-ಸೈನ್ಡ್’ (Pre-signed blank cheques) ಖಾಲಿ ಚೆಕ್ಗಳನ್ನು ಇಡಲಾಗಿತ್ತು.
ಈಗ ಈ ಚೆಕ್ಗಳು ಬಂಡಾಯಗಾರರ ಕೈಗೆ ಸಿಕ್ಕರೆ, ಅವರು ಪಕ್ಷದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ಡ್ರಾ ಮಾಡಿಕೊಳ್ಳಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ದೊಡ್ಡ ಭಯ ಅಧಿಕೃತ ನಾಯಕತ್ವವನ್ನು ಕಾಡುತ್ತಿದೆ.
ಇದೇ ಕಾರಣಕ್ಕೆ ಬ್ಯಾಂಕ್ ತಕ್ಷಣವೇ ಮಧ್ಯಪ್ರವೇಶಿಸಿ ಹಣಕಾಸು ಹೈಜಾಕ್ ಆಗುವುದನ್ನು ತಡೆಯಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ಒಟ್ಟಾರೆಯಾಗಿ, ಶಾಸಕರು-ಸಂಸದರನ್ನು ಕಳೆದುಕೊಂಡು ಕಂಗಾಲಾಗಿದ್ದ ಟಿಎಂಸಿ ನಾಯಕತ್ವಕ್ಕೆ, ಈಗ ಪಕ್ಷದ ಕೋಟ್ಯಂತರ ರೂಪಾಯಿ ಫಂಡ್ ಕೂಡ ಕೈತಪ್ಪಿ ಹೋಗುವ ಭೀತಿ ಎದುರಾಗಿದೆ. ಕಳೆದ ಕೆಲವು ವಾರಗಳಿಂದ ಹಲವು ರಾಜಕೀಯ ಮತ್ತು ಸಾಂಸ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಪಕ್ಷದೊಳಗೆ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಬಿರುಕುಗಳು ಎಷ್ಟು ಆಳವಾಗಿವೆ ಎಂಬುದನ್ನು ಈ ಬೆಳವಣಿಗೆಯು ಎತ್ತಿ ತೋರಿಸುತ್ತದೆ. ಆದರೆ, ಈ ಬೆಳವಣಿಗೆಯ ಕುರಿತು ಪಕ್ಷದ ಹಿರಿಯ ನಾಯಕತ್ವ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



ನಿಮ್ಮ ಕಾಮೆಂಟ್ ಬರೆಯಿರಿ