ಸಿದ್ದಾಪುರ : ಜನಮನ ಸೂರೆಗೊಂಡ ರಾಮಕಥಾ ಯಕ್ಷನೃತ್ಯ ರೂಪಕ

ಸಿದ್ದಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕರ್ನಾಟಕದ ಶಿರಸಿ ಜಿಲ್ಲಾ ಹಾಗೂ ಸಿದ್ದಾಪುರ ತಾಲೂಕು ಸಮಿತಿಗಳ ಸಹಯೋಗದಲ್ಲಿ ಪಟ್ಟಣದ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಯಕ್ಷ ರಾಮಕಥಾ ಯಕ್ಷನೃತ್ಯ ರೂಪಕ ಕಾರ್ಯಕ್ರಮ
ಪ್ರದರ್ಶನಗೊಂಡಿತು.
ಈ ಕಾರ್ಯಕ್ರಮದಲ್ಲಿ ಪೂರ್ವಭಾವಿಯಾಗಿ ಮಾತನಾಡಿದ ಶ್ರೀರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಹಾಗೂ ವಾಗ್ಮಿ ಮೋಹನ ಹೆಗಡೆ ಹೆರವಟ್ಟಾ, ರಾಮಾಯಣವು ಕಾಲಾತೀತ ಮಹಾಕಾವ್ಯವಾಗಿದ್ದು, ಅದರ ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಯಕ್ಷಗಾನದ ಬೆಳವಣಿಗೆಗೆ ಕಲಾವಿದರು ಮತ್ತು ಅಭಿಮಾನಿಗಳು ನಿರಂತರವಾಗಿ ಕೊಡುಗೆ ನೀಡಬೇಕಿದ್ದು, ಆ ನಿಟ್ಟಿನಲ್ಲಿ ಯಕ್ಷ ರಾಮಕಥಾ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ರಾಮಕಥೆಯ ಮೊದಲ ಕಥೆಗಾರ ಹನುಮಂತ. ಸೀತಾನ್ವೇಷೆಣೆಗೆ ಲಂಕೆಗೆ ತೆರಳಿದ ಹನುಮಂತನು ಅಶೋಕ ವನದಲ್ಲಿ ದುಃಖ ಮತ್ತು ಭಯದಲ್ಲಿದ್ದ ಸೀತಾದೇವಿಗೆ ತನ್ನ ಪರಿಚಯ ಮಾಡಿಕೊಳ್ಳುವ ಮೊದಲು ಸೀತಾಪಹರಣದವರೆಗಿನ ರಾಮಕಥೆಯನ್ನು ವಿವರಿಸಿದ್ದನು. ಈ ಮೂಲಕ ಸೀತಾದೇವಿಯ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದನು. ಆ ಮೇಲೆ ಮಹರ್ಷಿ ವಾಲ್ಮೀಕಿಗಳು ತಮಸಾ ನದಿಯ ತೀರದ ತಮ್ಮ ಆಶ್ರಮದಲ್ಲಿ
ಸಂಪೂರ್ಣ ರಾಮಾಯಣವನ್ನು ಬರೆದು ಕುಶ, ಲವರಿಗೆ ಬೋಧಿಸಿದರು. ಅವರು ಅದನ್ನು ರಾಮಕಥೆಯಾಗಿ ಹಾಡಿದರು ಎಂದು ವಿವರಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಶಿರಸಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪತ್ರಕರ್ತ ಗಂಗಾಧರ ಕೊಳಗಿ ಪ್ರಾಸ್ತಾವಿಕ ಮಾತನಾಡಿ ಮರೆತುಹೋಗುತ್ತಿರುವ ಹಾಗೂ ಇಂದಿಗೂ ಪ್ರಸ್ತುತವಾಗಿರುವ ಭಾರತೀಯ ಪರಂಪರೆ ಮತ್ತು ಮೌಲ್ಯಗಳನ್ನು ಪುನಃ ಸ್ಮರಿಸಿಕೊಂಡು ಮುಂದಿನ ಪೀಳಿಗೆಗೆ
ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನೃತ್ಯ, ಗಾಯನ, ವಾದನದಲ್ಲಿ ರಾಮಕಥೆ ಬಿಚ್ಚಿಟ್ಟ ಕಲಾವಿದರು:
ಬಳಿಕ ಪ್ರದರ್ಶನಗೊಂಡ ಯಕ್ಷ ರಾಮಕಥಾ ಯಕ್ಷನೃತ್ಯ ರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಕೇಶವ ಹೆಗಡೆ ಕೊಳಗಿ ಅವರ ಭಾಗವತಿಕೆಯಲ್ಲಿ ರಾಮಕಥೆ ಅನುರುಣಿಸಿತು. ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅವರು ತಮ್ಮ ವಿಶಿಷ್ಟ ನರ್ತನ ಶೈಲಿ, ಭಾವಪೂರ್ಣ ಅಭಿವ್ಯಕ್ತಿ ಮತ್ತು ಪರಿಣಾಮಕಾರಿ ಸಂಭಾಷಣೆ ಮೂಲಕ ರಾಮಕಥೆಯನ್ನು ಜೀವಂತವಾಗಿ ಅನಾವರಣಗೊಳಿಸಿದರು. ಹೆಜ್ಜೆಗಳ ಲಯಬದ್ಧತೆ, ಆಂಗಿಕ ಅಭಿನಯಗಳ ಮೂಲಕ ಪಾತ್ರಗಳ ಭಾವಲೋಕವನ್ನು ಕಟ್ಟಿಕೊಡುವ ಸಾಮರ್ಥ್ಯ ಹಾಗೂ ಕಥಾ ಸಂದರ್ಭಗಳಿಗೆ ತಕ್ಕಂತೆ ನೃತ್ಯವನ್ನು ಹೆಣೆಯುವ ಅವರ ವಿಶೇಷತೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಪ್ರಮುಖ ಸುದ್ದಿ :-   ಒಪ್ಪಿಗೆಯಿಲ್ಲದೆ ಖಾಸಗಿ ವೀಡಿಯೊ-ಫೋಟೊ ಶೇರ್ ಮಾಡಿದ್ರೆ ಎಫ್‌ಐಆರ್ : ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

ಪಾರಂಪರಿಕ ಯಕ್ಷಗಾನ ಶೈಲಿಯಲ್ಲಿ ಅಪರೂಪವಾಗಿ ನೃತ್ಯದ ಮೂಲಕ ರಾಮಕಥೆಯನ್ನು ನಿರೂಪಿಸಿದ ಕಲಗದ್ದೆ ಪಟ್ಟಾಭಿಷೇಕದ ಸಂಭ್ರಮ, ವನವಾಸಕ್ಕೆ ಹೊರಡುವಾಗಿನ ರಾಮನ ಸ್ಥಿತಪ್ರಜ್ಞತೆ, ಭರತನ ಭೇಟಿಯ ಭಾವನಾತ್ಮಕ ಕ್ಷಣಗಳು, ಸೀತಾನ್ವೇಷಣೆ, ರಾವಣ ವಧೆ ಹಾಗೂ ರಾಮನಿರ್ಯಾಣದ ವರೆಗಿನ ಘಟನಾವಳಿಗಳನ್ನು ಮನಮುಟ್ಟುವ ರೀತಿಯಲ್ಲಿ ಬಿಚ್ಚಿಟ್ಟರು. ವಿಶೇಷವಾಗಿ ಸೀತಾದೇವಿಯ ಮೇಲೆ ಲೋಕೋಪವಾದ ವ್ಯಕ್ತವಾದಾಗ ಅವರನ್ನು ಅರಣ್ಯಕ್ಕೆ ಕಳುಹಿಸುವ ಸಂದರ್ಭದಲ್ಲಿಯೂ ತಾನು ಇಷ್ಟೊಂದು ಸಂಕಷ್ಟ ಅನುಭವಿಸಿರಲಿಲ್ಲ. ಆದರೆ ಮಾತೆ ಸುಮಿತ್ರೆಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ವಿಧಿಸಬೇಕಾದ ಪ್ರಸಂಗದಲ್ಲಿ ರಾಮನ ಅಂತರಂಗದ ವೇದನೆ ಹಾಗೂ ಧರ್ಮಸಂಕಟವನ್ನು ವಿನಾಯಕ ಹೆಗಡೆ ಕಲಗದ್ದೆ ಅತ್ಯಂತ ಭಾವಪೂರ್ಣವಾಗಿ ಅಭಿವ್ಯಕ್ತಿಸಿದರು. ಕರ್ತವ್ಯ ಮತ್ತು ಸಂಬಂಧಗಳ ನಡುವಿನ ಸಂಘರ್ಷದಲ್ಲಿ ತೊಳಲಾಡುವ ರಾಮನ ಮನಸ್ಥಿತಿಯನ್ನು ಅವರು ಜೀವಂತವಾಗಿ ಕಟ್ಟಿಕೊಟ್ಟರು.
ಮದ್ದಲೆಯಲ್ಲಿ ವಾದಕ ಶರತ್ ಜಾನಕೈ ಹಾಗೂ ಚಂಡೆಯಲ್ಲಿ ವಾದಕ ಭಾರ್ಗವ ಹೆಗ್ಗೋಡು ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಯೋಗ ಸಮಿತಿ ಸದಸ್ಯೆಯರು ದೇಶಭಕ್ತಿ ಗೀತೆ ಹಾಡಿದರು. ಅಭಾಸಾಪ ತಾಲೂಕು ಸಮಿತಿ ಅಧ್ಯಕ್ಷ ರಾಮಚಂದ್ರ ಎನ್.ಹಳಕಾರ
ವಂದಿಸಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ.ಎಲ್. ಹೆಗಡೆ ಕುಮಟಾ, ಮಾಯಾ ಹೆಗಡೆ, ಅಶೋಕ ಭಟ್ಟ ಸಿದ್ದಾಪುರ, ನಾಗರಾಜ ಜೋಶಿ ಸೋಂದಾ, ಮಾರುತಿ ನಾಯ್ಕ, ವಿ.ಎಂ. ತ್ಯಾಗಲಿ, ತುಳಸಿ ಹೆಗಡೆ, ಸಂಧ್ಯಾ ಶಾಸ್ತ್ರಿ ಸೇರಿದಂತೆ ಸಾಹಿತ್ಯಾಸಕ್ತರು, ಯಕ್ಷಗಾನ ಅಭಿಮಾನಿಗಳು ಹಾಗೂ ಸರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement