ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ತಂದಿದ್ದರೆ, ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ತೀವ್ರ ಮುಜುಗರ ತಂದಿಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಸ್ಥಾನಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಜಯಗಳಿಸಿದರೆ ಬಿಜೆಪಿ ಎರಡರಲ್ಲಿ ಜಯಗಳಿಸಿದೆ. ಆದರೆ, ಈ ಎಲ್ಲದರ ನಡುವೆ ವಿಪಕ್ಷಗಳ ಶಾಸಕರು ದೊಡ್ಡ ಮಟ್ಟದಲ್ಲಿ ‘ಕ್ರಾಸ್ ವೋಟಿಂಗ್’ (ಅಡ್ಡ ಮತದಾನ) ಮಾಡಿರುವ ಆರೋಪಗಳು ಈಗ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿವೆ.
ಲೆಕ್ಕಾಚಾರಗಳ ಪ್ರಕಾರ, ವಿಪಕ್ಷಗಳ ಹಲವು ಶಾಸಕರು ಅಧಿಕೃತವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೈಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದು ಫಲಿತಾಂಶವು ಸೂಚಿಸಿದೆ.
ಲೆಕ್ಕಾಚಾರ ಉಲ್ಟಾ-ಪಲ್ಟಾ: ಕಾಂಗ್ರೆಸ್‌ಗೆ ಲಭಿಸಿದ 11 ಹೆಚ್ಚುವರಿ ಮತಗಳು!
ತನ್ನ ಐದೂ ಅಭ್ಯರ್ಥಿಗಳನ್ನು ಸುರಕ್ಷಿತವಾಗಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌ಗೆ ಒಟ್ಟು 140 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿತ್ತು. ಆದರೆ, ಮತ ಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಬುಟ್ಟಿಗೆ ಬಿದ್ದ ಒಟ್ಟು ಪ್ರಥಮ ಪ್ರಾಶಸ್ತ್ಯದ ಮತಗಳ ಸಂಖ್ಯೆ ಬರೋಬ್ಬರಿ 151! ಈ ಅನಿರೀಕ್ಷಿತ 11 ಹೆಚ್ಚುವರಿ ಮತಗಳು ವಿರೋಧ ಪಕ್ಷಗಳಿಂದಲೇ ಹರಿದುಬಂದಿವೆ ಎಂಬುದು ಈಗ ಚರ್ಚಿತ ವಿಷಯ.
ಚುನಾವಣೆಯು ‘ರಹಸ್ಯ ಮತದಾನ’ ಪದ್ಧತಿಯಲ್ಲಿ ನಡೆದಿರುವುದರಿಂದ, ಪಕ್ಷದ ಆಜ್ಞೆ (ವ್ಹಿಪ್) ಉಲ್ಲಂಘಿಸಿ ಕಾಂಗ್ರೆಸ್ ಪರ ಮತ ಹಾಕಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
ಬಿಜೆಪಿ ನಾಯಕರ ಆಂತರಿಕ ವಲಯದ ಪ್ರಕಾರ, ಈಗಾಗಲೇ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರಲ್ಲದೆ, ಇನ್ನೂ ಕೆಲವು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಇತ್ತ ಜೆಡಿಎಸ್‌ನಲ್ಲೂ ಕ್ರಾಸ್ ವೋಟಿಂಗ್ ಕುರಿತು ಚರ್ಚೆಗಳು ನಡೆದಿವೆ. ಜೆಡಿಎಸ್‌ನ ಕೆಲವು ಶಾಸಕರು ಅಡ್ಡ ಮತದಾನ ಮಾಡಿರುವುದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಗೋವಿಂದ ರಾಜು ಅವರು ಜೆಡಿಎಸ್‌ನಲ್ಲಿ  18 ಶಾಸಕರಿದ್ದರೂ 14 ಮತಗಳನ್ನು ಪಡೆರುವುದು ಸಾಕ್ಷಿಯಾಗಿದೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ  ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್. ಶಿವಣ್ಣ, ಬಿ.ಕೆ. ಹರಿಪ್ರಸಾದ, ಪಿ.ವಿ. ಮೋಹನ ಜಯಗಳಿಸಿದ್ದಾರೆ.  ಆದರೆ, ಅಚ್ಚರಿಯೆಂದರೆ ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ ಕಾರ್ತಿಕ ಎಲ್ಲರಿಗಿಂತ ಹೆಚ್ಚು ಮತಗಳನ್ನು ಪಡೆದು ಭರ್ಜರಿ ಜಯದೊಂದಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ.
ಅಭ್ಯರ್ಥಿಗಳು ಪಡೆದಮತಗಳು
ವಿನಯ ಕಾರ್ತಿಕ್ (ಕಾಂಗ್ರೆಸ್) – 32 ಮತಗಳು (ವಿಜಯಿ)
ತಿಪ್ಪಣ್ಣಪ್ಪ ಕಮಕನೂರ (ಕಾಂಗ್ರೆಸ್) – 30 ಮತಗಳು (ವಿಜಯಿ)
ಬಿ.ಎಸ್. ಶಿವಣ್ಣ (ಕಾಂಗ್ರೆಸ್) – 30 ಮತಗಳು (ವಿಜಯಿ)
ಬಿ.ಕೆ. ಹರಿಪ್ರಸಾದ (ಕಾಂಗ್ರೆಸ್) – 30 ಮತಗಳು (ವಿಜಯಿ)
ಪಿ.ವಿ. ಮೋಹನ (ಕಾಂಗ್ರೆಸ್) – 29 ಮತಗಳು (ವಿಜಯಿ)
ರಘು ಕೌಟಿಲ್ಯ (ಬಿಜೆಪಿ) – 29 ಮತಗಳು (ವಿಜಯಿ)
ಲಿಂಗರಾಜ ಪಾಟೀಲ್ (ಬಿಜೆಪಿ) – 27 ಮತಗಳು (ವಿಜಯಿ)
ಗೋವಿಂದರಾಜು (ಜೆಡಿಎಸ್) – 14 ಮತಗಳು (ಪರಾಜಿತ)
ಜೂನ್ 18 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಡೆದ ಮತದಾನದಲ್ಲಿ ಎಲ್ಲಾ 222 ಅರ್ಹ ಶಾಸಕರು ಭಾಗವಹಿಸುವ ಮೂಲಕ ಶೇ. 100 ರಷ್ಟು ದಾಖಲೆಯ ಮತದಾನವಾಗಿತ್ತು. ತೆರವಾಗಿದ್ದ 7 ಸ್ಥಾನಗಳಿಗೆ ಅನುಪಾತ ಪ್ರಾತಿನಿಧ್ಯ ಪದ್ಧತಿಯಡಿ ಚುನಾವಣೆ ನಡೆದಿದ್ದು, ಗೆಲುವಿಗೆ ಕನಿಷ್ಠ 28 ಮತಗಳ ಅಗತ್ಯವಿತ್ತು.
ಜೂನ್ 30 ಕ್ಕೆ ನಿವೃತ್ತರಾಗಲಿರುವ 7 ಸದಸ್ಯರ ಸ್ಥಾನಗಳಿಗೆ ಈ ಚುನಾವಣೆ ನಡೆಸಲಾಗಿತ್ತು. ನಿವೃತ್ತರಾಗುತ್ತಿರುವವರಲ್ಲಿ ಕಾಂಗ್ರೆಸ್‌ನ ಗೋವಿಂದರಾಜು, ನಸೀರ್ ಅಹ್ಮದ್, ತಿಪ್ಪಣ್ಣಪ್ಪ ಮತ್ತು ಬಿ.ಕೆ. ಹರಿಪ್ರಸಾದ ಹಾಗೂ ಬಿಜೆಪಿಯ ಎಂ.ಟಿ.ಬಿ. ನಾಗರಾಜ, ಪ್ರತಾಪ ಸಿಂಹ ನಾಯಕ್ ಮತ್ತು ಸುನಿಲ ವಲ್ಯಾಪುರೆ ಸೇರಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲವರ್ಧನೆ
ಈ ಚುನಾವಣೆ ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ, ವಿಶೇಷವಾಗಿ ಚುನಾವಣಾ ತಂತ್ರಗಾರಿಕೆಯ ಉಸ್ತುವಾರಿ ಹೊತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಾಗಿತ್ತು. ವಿಪಕ್ಷಗಳ ಕೋಟೆಗೆ ಲಗ್ಗೆ ಇಟ್ಟು, ಹೆಚ್ಚುವರಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದ ಡಿಕೆಶಿ ಅವರ ರಾಜಕೀಯ ಚಾಣಾಕ್ಷತನಕ್ಕೆ ಈ ಫಲಿತಾಂಶ ಮತ್ತೊಂದು ಸಾಕ್ಷಿಯಾಗಿದೆ.
ಈ ಗೆಲುವಿನೊಂದಿಗೆ 75 ಸದಸ್ಯರ ಬಲದ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಪ್ರಮುಖ ಮಸೂದೆಗಳನ್ನು ಮೇಲ್ಮನೆಯಲ್ಲಿ ಸುಲಭವಾಗಿ ಅಂಗೀಕರಿಸಿಕೊಳ್ಳಲು ಇದು ಸರ್ಕಾರಕ್ಕೆ ದೊಡ್ಡ ಆನೆಯ ಬಲ ತಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement