ನವದೆಹಲಿ: ಬಿಜೆಪಿ ಹಿರಿಯ ನಾಯಕ ಜಾರ್ಜ್ ಕುರಿಯನ್ ಅವರು ಮಂಗಳವಾರ (ಜೂನ್ 23) ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ರಾಜ್ಯಸಭಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
65 ವರ್ಷದ ಜಾರ್ಜ್ ಕುರಿಯನ್ ಅವರು ಕೇರಳದ ಪ್ರಮುಖ ಬಿಜೆಪಿ ನಾಯಕ, ವಕೀಲರಾಗಿದ್ದಾರೆ. ಇವರು ಸೆಪ್ಟೆಂಬರ್ 20, 1960 ರಂದು ಕೊಟ್ಟಾಯಂ ಜಿಲ್ಲೆಯ ಎಟ್ಟುಮನೂರು ಪುರಸಭೆಯ ನಂಬಿಯಾಕುಲಂನಲ್ಲಿ ಜನಿಸಿದರು. ಕಾನೂನು ವ್ಯಾಸಂಗ ಮಾಡಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಇವರು, ನಂತರ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
1980 ರಲ್ಲಿ ಬಿಜೆಪಿ ಪಕ್ಷ ಸ್ಥಾಪನೆಯಾದಾಗಿನಿಂದಲೂ ಇವರು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ವರ್ಷಗಳ ಅವಧಿಯಲ್ಲಿ ಕೇರಳ ಬಿಜೆಪಿ ಘಟಕದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಜಾರ್ಜ್ ಕುರಿಯನ್ ಅವರು ಜೂನ್ 9, 2024 ರಂದು ಕೇಂದ್ರ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು ಜೂನ್ 11 ರಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಗೆ ಆಯ್ಕೆಯಾದ ನಂತರ ತೆರವಾಗಿದ್ದ ಸ್ಥಾನಕ್ಕೆ, ಆಗಸ್ಟ್ 2024 ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಜಾರ್ಜ್ ಕುರಿಯನ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾದ ಇವರ ಮೇಲ್ಮನೆಯ ಅವಧಿಯು ಜೂನ್ 21, 2026 ಕ್ಕೆ ಕೊನೆಗೊಂಡಿತು. ಜೂನ್ 2026 ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಇವರಿಗೆ ಮತ್ತೆ ಟಿಕೆಟ್ ನೀಡಿರಲಿಲ್ಲ. ಇವರನ್ನು ಕೈಬಿಟ್ಟಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗಲಿವೆ ಎಂಬ ಚರ್ಚೆಗಳು ಮುಂಚೂಣಿಗೆ ಬಂದಿದ್ದವು.
ಸಚಿವರಾಗುವ ಮುನ್ನ ಅಲಂಕರಿಸಿದ್ದ ಹುದ್ದೆಗಳು
ಕೇಂದ್ರ ಸಚಿವರಾಗುವ ಮೊದಲು ಜಾರ್ಜ್ ಕುರಿಯನ್ ಅವರು ‘ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ’ದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಹಿರಿಯ ಬಿಜೆಪಿ ನಾಯಕ ಒ. ರಾಜಗೋಪಾಲ್ ಅವರು ಕೇಂದ್ರ ರೈಲ್ವೆ ಸಹಾಯಕ ಸಚಿವರಾಗಿದ್ದ ಅವಧಿಯಲ್ಲಿ ಕುರಿಯನ್ ಅವರು ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ಕಾರ್ಯನಿರ್ವಹಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ