ಮುಂಡಗೋಡ | ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಮಂಗಳವಾರ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರಲೋಕಾಯುಕ್ತ ಅಧಿಕಾರಿಗಳು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಹೆಸ್ಕಾಂ ಉಪವಿಭಾಗದ ಎಇಇ ಹಾಗೂ ಕಂದಾಯ ನಿರೀಕ್ಷಕ ಪ್ರತ್ಯೇಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕಾರವಾರ ಹಾಗೂ ಧಾರವಾಡ ಲೋಕಾಯುಕ್ತ ಘಟಕಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಧರ್ಮರಾಜ ಬೆಡಸಗಾಂವ್ ಅವರು ₹65 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಎಂಬವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು, ಬಿಸಿಎಂ ವಸತಿ ನಿಲಯದ ವಿದ್ಯುತ್ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಸಂಬಂಧ ಲಂಚದ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮುಂಗಡವಾಗಿ ₹65 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೆ,  ಮತ್ತೊಂದು ಪ್ರಕರಣದಲ್ಲಿ ಪಾಳ ಹಾಗೂ ಮುಂಡಗೋಡ ವ್ಯಾಪ್ತಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಬಿಸನಾಳ ಕೂಡ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಫಾರ್ಮ್ ಹೌಸ್ ಪರವಾನಿಗೆ ನೀಡುವ ಸಂಬಂಧ ಕೃಷಿಕ ನಾರಾಯಣ ಅರೆಜೋಗಿ ಎಂಬವರಿಂದ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಕಾರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಎರಡೂ ಪ್ರಕರಣಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ಅಬಕಾರಿ ಹೆಚ್ಚುವರಿ ಆಯುಕ್ತ-ಸಚಿವ ಸತೀಶ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇ.ಡಿ ದಾಳಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement