ಟ್ರಸ್ಟ್ ಹೆಸರಲ್ಲಿ ಖರ್ಗೆ ಕುಟುಂಬದಿಂದ ಕರ್ನಾಟಕದಲ್ಲಿ ‘ಭೂ ಕಬಳಿಕೆ’ : ಬಿಜೆಪಿ ಗಂಭೀರ ಆರೋಪ
ನವದೆಹಲಿ : ಕಾಂಗೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ತಮ್ಮ “ಅಧಿಕಾರ ಮತ್ತು ಪ್ರಭಾವ”ವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬುಧವಾರ ಆರೋಪಿಸಿರುವ ಬಿಜೆಪಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದೆ.
ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಪ್ರದೀಪ ಭಂಡಾರಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಖರ್ಗೆ ಮತ್ತು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಅವರ ಪುತ್ರ ತಮ್ಮ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಮೂಲಕ “ಭೂ ಲೂಟಿ”ಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. “ಅವರ ಕಾರ್ಯವೈಖರಿಯು (ಮೋಡಸ್ ಒಪೆರಾಂಡಿ) ರಾಬರ್ಟ್ ವಾದ್ರಾ ಮತ್ತು ರಾಹುಲ್ ಗಾಂಧಿ ಕುಟುಂಬದಿಂದ ಪ್ರೇರಿತವಾಗಿದೆ ” ಎಂದು ಅವರು ವಾಗ್ದಾಳಿ ನಡೆಸಿದರು.
ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಯಾವುದೇ ಪೂರ್ವ ಅನುಭವ ಇಲ್ಲದಿದ್ದರೂ, ಕಾಂಗ್ರೆಸ್ ಸರ್ಕಾರವು 100 ಕೋಟಿ ರೂ. ಮೌಲ್ಯದ 5 ಎಕರೆ ಜಮೀನನ್ನು ನೀಡಿದೆ ಎಂದು ಭಂಡಾರಿ ಬುಧವಾರ ಆರೋಪಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು 2016 ರಲ್ಲಿ ಗುಲ್ಬರ್ಗ (ಕಲಬುರಗಿ) ಜಿಲ್ಲೆಯಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 19 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ನೀಡಿತ್ತು, ಅದನ್ನು ನಂತರ ಖರ್ಗೆ ಕುಟುಂಬದ “ಕಾಯಂ ಆಸ್ತಿ” ಮಾಡಲು ಶಾಶ್ವತ ಗುತ್ತಿಗೆಯಾಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ವಕ್ತಾರರು ಪ್ರತಿಪಾದಿಸಿದರು. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಪುತ್ರ “ಭ್ರಷ್ಟಾಚಾರ ಮತ್ತು ಅನುಚಿತ ನಡವಳಿಕೆ” ಎಸಗಿದ್ದಾರೆ ಎಂದು ಆರೋಪಿಸಿದರು.
“ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಬಳಸಿ ವಿವಿಧ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಿವಿಧ ಸ್ಥಳಗಳಲ್ಲಿ ಭೂ ಲೂಟಿ ಮಾಡಲು ಪ್ರಯತ್ನಿಸಿದ್ದಾರೆ,” ಎಂದು ಭಂಡಾರಿ ಹೇಳಿದರು.
“ಇದು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ. ಇದು ಕಾನೂನಿನಡಿಯಲ್ಲಿ ಸಂಜ್ಞೇಯ ಅಪರಾಧವಾಗಿದೆ (ಕಾಗ್ನಿಸಬಲ್ ಅಫೆನ್ಸ್),” ಎಂದು ಆರೋಪಿಸಿದ ಬಿಜೆಪಿ ವಕ್ತಾರರು, ಈ ವಿಷಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಖರ್ಗೆ ಮತ್ತು ಅವರ ಪುತ್ರನ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿದ್ದಾರ್ಥ ವಿಹಾರ್ ಟ್ರಸ್ಟ್ ನಲ್ಲಿ ಕೇವಲ ಖರ್ಗೆ ಕುಟುಂಬದ ಸದಸ್ಯರು ಮಾತ್ರ ಇದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ, ಖರ್ಗೆ ಅವರ ಅಳಿಯ ಮತ್ತು ಅವರ ಧರ್ಮಪತ್ನಿ ಸದಸ್ಯರಾಗಿದ್ದಾರೆ. ಇಡೀ ಕುಟುಂಬವೇ ಸೇರಿಕೊಂಡು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧೆಡೆ ಬಡವರ ಭೂಮಿಯನ್ನು ಲೂಟಿ ಮಾಡಿದೆ ಎಂದು ಅವರು ಆರೋಪಿಸಿದರು.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಮತ್ತು ಅಭಿವೃದ್ಧಿ’ ಹೆಸರಿನಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಭಾರಿ ಮೌಲ್ಯದ 5 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕಾ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕಿದ್ದ ಈ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ನೀಡಲಾಗಿದ್ದು, ಇದರ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂ.” ಎಂದು ಅವರು ಹೇಳಿದರು.
2016 ರಲ್ಲಿ ಕಲಬುರಗಿಯಲ್ಲಿ 19 ಎಕರೆ ಭೂಮಿಯನ್ನು ಟ್ರಸ್ಟಿಗೆ 30 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು, ನಂತರ ಅದನ್ನು ಕಾಯಂಗೊಳಿಸಲಾಯಿತು ಎಂದು ಅವರು ಆರೋಪಿಸಿದರು. 2018 ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಭೂ ವರ್ಗಾವಣೆಗೆ ಸಂಬಂಧಿಸಿದ ಲೋಪವನ್ನು ಬಹಿರಂಗಪಡಿಸಿದೆ ಎಂದು ಭಂಡಾರಿ ಹೇಳಿದರು.
ಕಲಬುರಗಿಯಲ್ಲಿನ ಜಮೀನೊಂದನ್ನು ಖರ್ಗೆ ಅವರ ಟ್ರಸ್ಟ್‌ಗೆ ಕಾಯಂ ಆಗಿ ವರ್ಗಾಯಿಸಿಕೊಳ್ಳಲು ನಕಲಿ ಮಾರಾಟಗಾರನನ್ನು ಸೃಷ್ಟಿಸಲಾಗಿತ್ತು ಎಂದು ಅವರು ಆರೋಪಿಸಿದರು. ‘ಆ ಜಮೀನನ್ನು ಮಾರಾಟ ಮಾರಾಟ ಮಾಡಿದ ಅಸಲಿ ವ್ಯಕ್ತಿ ಯಾರು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಈ ರೀತಿಯಾಗಿ ಭೂಮಿಯನ್ನು ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ