ತೋತಾಪುರಿ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ; ಕರ್ನಾಟಕದ 1.3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌

ಬೆಂಗಳೂರು/ನವದೆಹಲಿ: ಕರ್ನಾಟಕದ ಮಾವು ಬೆಳೆಗಾರರ ತೀವ್ರ ಸಂಕಷ್ಟಕ್ಕೆ ಕೇಂದ್ರ ಸರ್ಕಾರವು ಸ್ಪಂದಿಸಿದೆ. ರಾಜ್ಯದ ಪ್ರಮುಖ ಮಾವು ಉತ್ಪಾದನಾ ವಲಯವಾದ ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ಬೆಲೆ ಕುಸಿತ ಹಾಗೂ ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (MIS) ಅಡಿಯಲ್ಲಿ 1.3 ಲಕ್ಷ ಮೆಟ್ರಿಕ್ ಟನ್ (MT) ತೋತಾಪುರಿ ತಳಿಯ ಮಾವನ್ನು ಎಂಐಪಿ (MIP) ಖರೀದಿಸಲು ಕೇಂದ್ರ ಸರ್ಕಾರ ಗುರುವಾರ (ಜೂನ್ 25) ಹಸಿರು ನಿಶಾನೆ ತೋರಿದೆ. ಇದರನ್ವಯ ಪ್ರತಿ ಕ್ವಿಂಟಾಲ್ ತೋತಾಪುರಿ ಮಾವಿಗೆ ₹1,750 ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ.
ಕರ್ನಾಟಕದಲ್ಲಿ ತೋತಾಪುರಿ ಮಾವಿನ ಬೆಲೆಯು ಪ್ರತಿ ಕೆಜಿಗೆ ಕೇವಲ ₹5 ಕ್ಕೆ ಕುಸಿದಿತ್ತು. ಆದರೆ, ರೈತರಿಗೆ ಮಾವು ಬೆಳೆಯಲು ತಗಲುವ ಕನಿಷ್ಠ ವೆಚ್ಚವೇ ಪ್ರತಿ ಕೆಜಿಗೆ ಸುಮಾರು ₹8.6 ರಷ್ಟಿತ್ತು. ವೆಚ್ಚಕ್ಕಿಂತಲೂ ಕಡಿಮೆ ಬೆಲೆ ಸಿಗುತ್ತಿದ್ದರಿಂದ ಕಂಗಾಲಾಗಿದ್ದ ರೈತರು ತೀವ್ರ ಪ್ರತಿಭಟನೆಗೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರದ ಈ ನಿರ್ಧಾರವು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳ ಮಾವು ಬೆಳೆಗಾರರಿಗೆ ದೊಡ್ಡ ಮಟ್ಟದ ಆಸರೆಯಾಗಲಿದೆ.

ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ
ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್ 17 ರಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ ಅವರಿಗೆ ಪತ್ರ ಬರೆದು, ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವಂತೆ ಹಾಗೂ ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ಬೆಲೆ ನೀಡುವಂತೆ ಕೋರಿದ್ದರು. ಈ ಬೆನ್ನಲ್ಲೇ ಬುಧವಾರ ಸಂಜೆ ನವದೆಹಲಿಯ ಚೌಹಾಣ ಅವರ ನಿವಾಸದಲ್ಲಿ ಕುಮಾರಸ್ವಾಮಿ ಅವರು ಸುದೀರ್ಘ ಚರ್ಚೆ ನಡೆಸಿದ್ದರು. ಜೊತೆಗೆ ಕರ್ನಾಟಕ ಸರ್ಕಾರವೂ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ ಅವರು ಅನುಮೋದನಾ ಪತ್ರವನ್ನು ರವಾನಿಸಿದ್ದಾರೆ. “ರಾಜ್ಯ ಸರ್ಕಾರದ ಪ್ರಸ್ತಾವನೆಯ ಆಧಾರದ ಮೇಲೆ, 2026-27ರ ಮಾರುಕಟ್ಟೆ ಹಂಗಾಮಿಗಾಗಿ ಕರ್ನಾಟಕದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ₹1,750 ಎಂಐಪಿ (MIP) ದರದಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವು ಖರೀದಿಗೆ ಅನುಮೋದನೆ ನೀಡಲಾಗಿದೆ” ಎಂದು ಚೌಹಾಣ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಸಚಿವ ಕುಮಾರಸ್ವಾಮಿ, “ಕೇಂದ್ರ ಸರ್ಕಾರವು ರೈತರ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದು, ಬೆಲೆ ಕುಸಿತ ಮತ್ತು ಹವಾಮಾನ ವೈಪರೀತ್ಯದಂತಹ ಬಿಕ್ಕಟ್ಟುಗಳ ಸಮಯದಲ್ಲಿ ಸಕಾಲದಲ್ಲಿ ರೈತರನ್ನು ರಕ್ಷಿಸಲು ಬದ್ಧವಾಗಿದೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರ

https://x.com/hd_kumaraswamy/status/2069790135760367626/photo/1?ref_src=twsrc%5Etfw%7Ctwcamp%5Etweetembed%7Ctwterm%5E2069790135760367626%7Ctwgr%5E7cb5eff14411e8e041b2bbc3705449a9e36118ed%7Ctwcon%5Es1_&ref_url=https%3A%2F%2Fthesouthfirst.com%2Fkarnataka%2Fcentre-approves-procurement-of-1-3-lakh-mt-of-totapuri-mangoes-from-karnataka-after-kumaraswamys-intervention%2F

ಖರೀದಿ ಪ್ರಕ್ರಿಯೆಯ ಪ್ರಮುಖ ನಿಬಂಧನೆಗಳು ಮತ್ತು ಮಾರ್ಗಸೂಚಿಗಳು
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ:
ಗರಿಷ್ಠ ಮಿತಿ: ರಾಜ್ಯದ ಒಟ್ಟು ಅಂದಾಜು ಉತ್ಪಾದನೆಯಾದ 5.2 ಲಕ್ಷ ಮೆಟ್ರಿಕ್ ಟನ್‌ಗಳ ಪೈಕಿ ಶೇ. 25 ರಷ್ಟು, ಅಂದರೆ ಗರಿಷ್ಠ 1.3 ಲಕ್ಷ ಮೆಟ್ರಿಕ್ ಟನ್ ಮಾವನ್ನು ಮಾತ್ರ ಈ ಯೋಜನೆಯಡಿ ಖರೀದಿಸಬಹುದು.
ಮಾರಾಟ ಬೆಲೆ ನಿರ್ಧಾರ: ಮಾವಿನ ಮಾರಾಟದ ಬೆಲೆಯನ್ನು ಕರ್ನಾಟಕ ಸರ್ಕಾರದ ಕೃಷಿ/ತೋಟಗಾರಿಕೆ/ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ನಿರ್ಧರಿಸಲಿದೆ.
ಮಿತಿ: ಮಾರುಕಟ್ಟೆ ಮಧ್ಯಪ್ರವೇಶದ ಬೆಲೆ (MIP) ಮತ್ತು ಮಾರಾಟದ ಬೆಲೆಯ ನಡುವಿನ ವ್ಯತ್ಯಾಸದ ಮೊತ್ತದ ಪಾವತಿಯು ಎಂಐಪಿ(MIP)ಯ ಶೇ. 25ಕ್ಕಿಂತ ಹೆಚ್ಚಿರಬಾರದು.
ಎಪಿಎಂಸಿ ಕಡ್ಡಾಯ: ರೈತರು ಈ ಸೌಲಭ್ಯವನ್ನು ಪಡೆಯಲು ಕರ್ನಾಟಕದ ಅಧಿಸೂಚಿತ ಎಪಿಎಂಸಿ (APMC) ಮಾರುಕಟ್ಟೆಗಳ ಮೂಲಕವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ.
ಕಾಲಾವಧಿ: ಈ ಯೋಜನೆಗೆ ಅನುಮೋದನೆ ದೊರೆತು ಮೊದಲ ವಹಿವಾಟು ಆರಂಭವಾದ ದಿನದಿಂದ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಯೋಜನೆ ಜಾರಿಯಲ್ಲಿರುತ್ತದೆ.
ನಷ್ಟದ ಹಂಚಿಕೆ: ಯೋಜನೆಯ ಅನುಷ್ಠಾನದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ (50:50 ಅನುಪಾತದಲ್ಲಿ) ಭರಿಸಲಿವೆ.
ಅರ್ಹ ವರ್ತಕರ ಪಟ್ಟಿ: ಯೋಜನೆಯಲ್ಲಿ ಭಾಗವಹಿಸುವ ಅರ್ಹ ವ್ಯಾಪಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ಪ್ರಕಟಿಸಬೇಕು.

ಪ್ರಮುಖ ಸುದ್ದಿ :-   ನಟಿ ಕೃಷಿ ತಾಪಂಡ ಬೆಂಗಳೂರು ನಿವಾಸದಲ್ಲಿ ಉದ್ಯಮಿ ಶವವಾಗಿ ಪತ್ತೆ

ದರ ಪರಿಶೀಲನೆ: ಬೆಲೆಯ ವ್ಯತ್ಯಾಸವನ್ನು AGMARKNET ಪೋರ್ಟಲ್ ಮತ್ತು ರಾಜ್ಯ ಸರ್ಕಾರದ ಸಂಬಂಧಿತ ಪೋರ್ಟಲ್‌ನ ದತ್ತಾಂಶಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ದುಡಿಯುವ ಬಂಡವಾಳ: ರೈತರಿಗೆ ನೇರವಾಗಿ ಹಣ ಪಾವತಿಸಲು ಅಗತ್ಯವಿರುವ ದುಡಿಯುವ ಬಂಡವಾಳವನ್ನು (Working Capital) ಕರ್ನಾಟಕ ಸರ್ಕಾರವೇ ವ್ಯವಸ್ಥೆ ಮಾಡಿಕೊಳ್ಳಬೇಕು.
ದೈನಂದಿನ ವರದಿ: ಮಾರುಕಟ್ಟೆಗೆ ಬರುತ್ತಿರುವ ಮಾವಿನ ಪ್ರಮಾಣ ಮತ್ತು ಮಾದರಿ ಬೆಲೆಗಳ ಕುರಿತು ರಾಜ್ಯ ಸರ್ಕಾರವು ದಿನನಿತ್ಯ ಕೇಂದ್ರದ ಕೃಷಿ ಇಲಾಖೆಗೆ ವರದಿ ಸಲ್ಲಿಸಬೇಕು.
ಖಾತೆಗಳ ಪರಿಶೀಲನೆ: ಯೋಜನೆ ಪೂರ್ಣಗೊಂಡ ನಂತರ, ಕರ್ನಾಟಕ ಸರ್ಕಾರವು ತನ್ನ ವೆಚ್ಚದ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಕೃಷಿ ಇಲಾಖೆಯ ಕಾಸ್ಟಿಂಗ್ ಸೆಲ್ (Costing Cell) ಪರಿಶೀಲಿಸಿದ ಬಳಿಕವಷ್ಟೇ ಕೇಂದ್ರದ ಪಾಲಿನ ಹಣ ಬಿಡುಗಡೆಯಾಗಲಿದೆ.
ನೇರ ನಗದು ವರ್ಗಾವಣೆ: ಯೋಜನೆಯ ಲಾಭವನ್ನು ನೋಂದಾಯಿತ ರೈತರಿಗೆ ತಲುಪಿಸಲು, ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT – ಆಧಾರ್ ಲಿಂಕ್ಡ್) ಮೂಲಕವೇ ಹಣವನ್ನು ಜಮೆ ಮಾಡಬೇಕಿರುವುದು ಕಡ್ಡಾಯವಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement