ಇ.ಡಿ.ದಾಳಿ ; ಮಂಜುನಾಥ, ಆಪ್ತರ ಬಳಿ ₹5.5 ಕೋಟಿ ನಗದು, ₹7.8 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ…!

ಬೆಂಗಳೂರು : ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಹಾಗೂ ಇತರ ಅಧಿಕಾರಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ್ದ ದಾಳಿ ಅಂತ್ಯವಾಗಿದ್ದು ಸುಮಾರು 13 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಈ ಬಗ್ಗೆ ಸಮಗ್ರ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ಹೆಚ್ಚುವರಿ ಅಬಕಾರಿ ಆಯುಕ್ತ ವೈ.ಡಿ. ಮಂಜುನಾಥ ಹಾಗೂ ಇತರ ಅಧಿಕಾರಿಗಳಿಗೆ ಸೇರಿದ ಒಟ್ಟು 14 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಬರೋಬ್ಬರಿ ₹13.3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಕೆಳಗಿನ ಪ್ರಮುಖ ಅಬಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು.
ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಮಂಜುನಾಥಗೆ ಸೇರಿದ 13.3 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಬುಧವಾರ ಇ.ಡಿ. ಅಧಿಕಾರಿಗಳು ಮಂಜುನಾಥ ಹಾಗೂ ಅವರ ಆಪ್ತರು ಹಾಗೂ ಇಬ್ಬರು ಅಬಕಾರಿ ಅಧಿಕಾರಿಗಳಾದ ಜಗದೀಶ ನಾಯಕ್ ಮತ್ತು ಕೆ.ಎಂ. ತಮ್ಮಣ್ಣಅವರ ಮನೆ ಸೇರಿದಂತೆ  ಬೆಂಗಳೂರು, ಬೆಳಗಾವಿ ಸೇರಿ ಒಟ್ಟು 14 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.  ಮಂಜುನಾಥ ಹಾಗೂ ಆಪ್ತರ ಮನೆಯಿಂದ ದಾಳಿ ವೇಳೆ 5.5 ಕೋಟಿ ನಗದು,  7.8 ಕೋಟಿ ಮೌಲ್ಯದ ಚಿನ್ನಾಭರಣವನ್ನು ಇ.ಡಿ. ವಶಪಡಿಸಿಕೊಂಡಿದೆ. ಅಲ್ಲದೆ,  ದಾಳಿ ವೇಳೆ  ಸಾಕಷ್ಟು ಮಹತ್ವದ ದಾಖಲೆ, ಚಿನ್ನಾಭರಣ, ಬೇನಾಮಿ ಬಾರ್ ಲೈಸೆನ್ಸ್, ಬೇನಾಮಿ ಆಸ್ತಿ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ದಾಳಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
 ಇದರ ಜೊತೆಗೆ 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, ಕ್ಯಾಶ್ ಬುಕ್, ಆಸ್ತಿ ಪತ್ರಗಳು ದಾಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಶೋಧದ ಸಂದರ್ಭದಲ್ಲಿ ಸಿಕ್ಕ ಜಮೀನು, ನಿವೇಶನ, ವಾಣಿಜ್ಯ ಸಂಕೀರ್ಣಗಳ ದಾಖಲೆ ಪತ್ರಗಳ ಮೌಲ್ಯ ಲೆಕ್ಕ ಹಾಕಲಾಗುತ್ತಿದೆ. ಬ್ಯಾಂಕ್ ಖಾತೆ ಠೇವಣಿ, ಶೇರು ಹೂಡಿಕೆ, ಬಾಂಡ್, ಬ್ಯಾಂಕ್ ಲಾಕರ್ ಗಳ ಪರಿಶೀಲನೆ ನಡೆಯುತ್ತಿದೆ.
ಕರ್ನಾಟಕ ಅಬಕಾರಿ ಇಲಾಖೆಯು ಕೇವಲ ಸರ್ಕಾರಿ ಕಚೇರಿಯಂತೆ ಕೆಲಸ ಮಾಡುತ್ತಿಲ್ಲ, ಬದಲಿಗೆ ಅದೊಂದು ಸುಸಂಘಟಿತ ಅಪರಾಧ ಸಿಂಡಿಕೇಟ್‌ನಂತೆ (Organized Syndicate) ಕಾರ್ಯನಿರ್ವಹಿಸುತ್ತಿದೆ.ವಿವಿಧ ರೀತಿಯ ಅಬಕಾರಿ ಪರವಾನಗಿಗಳ (Licenses) ಪ್ರಕ್ರಿಯೆ ಮತ್ತು ವಿತರಣೆಗಾಗಿ ಈ ಅಧಿಕಾರಿಗಳು ವ್ಯಾಪಕವಾಗಿ ಲಂಚ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಇಡಿ ಹೇಳಿದೆ.
ಪ್ರಮುಖ ಆರೋಪಿಯಾಗಿರುವ ಬೆಳಗಾವಿ ಹೆಚ್ಚುವರಿ ಅಬಕಾರಿ ಆಯುಕ್ತ ವೈ.ಡಿ. ಮಂಜುನಾಥ ಅವರು ಪ್ರಭಾವಿ ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. ಇವರು ಬಳ್ಳಾರಿಯ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ಹಾಗೂ ರಾಜ್ಯದ ಪ್ರಸ್ತುತ ಲೋಕೋಪಯೋಗಿ (PWD) ಸಚಿವ ಸತೀಶ ಜಾರಕಿಹೊಳಿ ಅವರ ಭಾವಮೈದುನ ಆಗಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement