ಚಲಿಸುತ್ತಿದ್ದ ಕಾರಿನಲ್ಲೇ ಯುವತಿಗೆ ಚಾಕುವಿನಿಂದ ಇರಿದ ಯುವಕ ; ಕ್ಷಣದಲ್ಲೇ ಸ್ಫೋಟಗೊಂಡ ಕಾರಿನಲ್ಲಿ ಆತ ಸಜೀವ ದಹನ

ಬೆಂಗಳೂರು/ತುಮಕೂರು: ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನಲ್ಲೇ ಭಗ್ನ ಪ್ರೇಮಿ ಎಂದು ಹೇಳಲಾದ ವ್ಯಕ್ತಿಯೊಬ್ಬ ಯುವತಿಗೆ ಚಾಕು ಇರಿದು, ನಂತರ  ಪೆಟ್ರೋಲ್ ಬಾಂಬ್ ಸಿಡಿಸಿ ಸ್ಫೋಟಿಸಿಕೊಂಡು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಹಾಗೂ ಗಾಯಗೊಂಡಿರುವ ಯುವತಿಯನ್ನು ರಮ್ಯಾ  (23) ಎಂದು ಗುರುತಿಸಲಾಗಿದ್ದು, ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರು ಎನ್ನಲಾದ ರಮ್ಯಾ, ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಟೆಕ್ನಿಶಿಯನ್‌ (Operation Theatre Technician) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಚಾಲಕ ನೀಡಿರುವ ಆರಂಭಿಕ ಹೇಳಿಕೆಯ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಇಬ್ಬರೂ ಬೆಂಗಳೂರಿನಲ್ಲೇ ಕಾರು ಹತ್ತಿದ್ದಾರೆ. ಅಂಕೋಲಾಕ್ಕೆ ತೆರಳುತ್ತಿದ್ದರು. ಕಾರು ತಮುಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಬರುತ್ತಿದ್ದಂತೆ ಇಬ್ಬರ ನಡುವೆ  ವಾಗ್ವಾದ ಶುರುವಾಗಿದ್ದು, ಮಾತಿನ ಚಕಮಕಿ ತಾರಕಕ್ಕೇರಿದಾಗ, ನಾಗೇಂದ್ರ ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ಚಾಕು ಇರಿತದಿಂದ ಗಾಯಗೊಂಡಿದ್ದರೂ ರಮ್ಯಾ ಅವರು ನಾಗೇಂದ್ರ ಬಳಿ ಬಾಂಬ್ ಇದೆ ಎಂದು ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಅವರು ಗಾಯಗೊಂಡ ಸ್ಥಿತಿಯಲ್ಲಿಯೇ ಕಾರಿನಿಂದ ಹೊರಗೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಚಾಲಕ ಪ್ರವೀಣ ಕೂಡ ತಕ್ಷಣ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಾಹನದಿಂದ ಹೊರಗೆ ಇಳಿದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನಾಗೇಂದ್ರ ಕಾರಿನೊಳಗೆ ತಮ್ಮನ್ನು ತಾವು ಲಾಕ್‌ ಮಾಡಿಕೊಂಡು, ತನ್ನೊಂದಿಗೆ ತಂದಿದ್ದ ಎನ್ನಲಾದ  ಕಚ್ಚಾ ಬಾಂಬ್‌ ಅನ್ನು ಸ್ಫೋಟಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ.
ಆದರೆ, ಸ್ಫೋಟಕ್ಕೆ ನಿಖರ ಕಾರಣವೇನು ಹಾಗೂ ಯಾವ ರೀತಿಯ ಸ್ಫೋಟಕವನ್ನು ಬಳಸಲಾಗಿದೆ ಎಂಬುದನ್ನು ವಿಧಿ ವಿಜ್ಞಾನ (ಫೊರೆನ್ಸಿಕ್) ತಜ್ಞರು ಪರಿಶೀಲಿಸುತ್ತಿದ್ದು, ಅಂತಿಮ ವರದಿಯ ಬಳಿಕವೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಕಾರು ಚಾಲಕ ಪ್ರವೀಣ ಅವರಿಗೂ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ನಡುವಿನ ಸಂಬಂಧ ಏನು, ವಾಗ್ವಾದಕ್ಕೆ ಕಾರಣವೇನು ಹಾಗೂ ಸ್ಫೋಟ ಸಂಭವಿಸಿದ ಸಂದರ್ಭಗಳು ಸೇರಿದಂತೆ ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement