ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಭಾರಿ ಆಘಾತ; ಶಿಂಧೆ ಬಣಕ್ಕೆ ಸೇರ್ಪಡೆಯಾದ ಪರಿಷತ್‌ ಸದಸ್ಯ ಸಚಿನ್ ಅಹಿರ್

ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ಪಕ್ಷದ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಸಚಿನ್ ಅಹಿರ್ ಅವರು ಶಿವಸೇನೆ (ಯುಬಿಟಿ) ತೊರೆದು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಶಿಂಧೆ ಬಣ ಸೇರ್ಪಡೆಯಾದ ತಕ್ಷಣವೇ ಸಚಿನ್ ಅಹಿರ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಗೆ ಶಿವಸೇನೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಬೆಳವಣಿಗೆಯೊಂದಿಗೆ, ಎದುರಾಳಿ ಪಕ್ಷಗಳಿಂದ, ವಿಶೇಷವಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಯಿಂದ ನಾಯಕರನ್ನು ತನ್ನತ್ತ ಸೆಳೆಯುತ್ತಿರುವ ಏಕನಾಥ ಶಿಂಧೆಯ ರಾಜಕೀಯ ತಂತ್ರವಾದ ‘ಆಪರೇಷನ್ ಟೈಗರ್’ ಮತ್ತೆ ಚರ್ಚೆಗೆ ಬಂದಿದೆ.
ಸಚಿನ್ ಅಹಿರ್ ಅವರ ಸೇರ್ಪಡೆಗೂ ಮುನ್ನ, ಕೆಲದಿನಗಳ ಹಿಂದೆ ಶಿವಸೇನೆ (ಯುಬಿಟಿ)ಯ ಆರು ಲೋಕಸಭಾ ಸಂಸದರು ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದರು. ಪಕ್ಷ ವಿಭಜನೆಯಾದ ಬಳಿಕ ಉದ್ಧವ್ ಠಾಕ್ರೆ ಬಣಕ್ಕೆ ಎದುರಾದ ಅತಿದೊಡ್ಡ ರಾಜಕೀಯ ಹಿನ್ನಡೆಗಳಲ್ಲಿ ಇದೂ ಒಂದಾಗಿದೆ.
ಈ ಆರು ಸಂಸದರು ಅಧಿಕೃತವಾಗಿ ಶಿಂಧೆ ಬಣ ಸೇರುವುದಕ್ಕೂ ಐದು ದಿನಗಳ ಮುನ್ನ ದೆಹಲಿಯಲ್ಲಿ ನಡೆದ ಶಿವಸೇನೆ (ಯುಬಿಟಿ) ಸಂಸದೀಯ ಪಕ್ಷದ ಮಹತ್ವದ ಸಭೆಗೆ ಗೈರಾಗಿದ್ದರು. ಪರಿಣಾಮವಾಗಿ ಸಭೆಯಲ್ಲಿ ಕೇವಲ ಮೂವರು ಲೋಕಸಭಾ ಸದಸ್ಯರು ಮಾತ್ರ ಭಾಗವಹಿಸಿದ್ದರು. ಇದರಿಂದ ಪಕ್ಷದೊಳಗಿನ ರಾಜಕೀಯ ಸಂಕಷ್ಟದ ತೀವ್ರತೆ ಸ್ಪಷ್ಟವಾಗಿತ್ತು.
ಶಿಂಧೆ ಬಣ ಸೇರಿದ ಆರು ಸಂಸದರು
ಶಿಂಧೆ ನೇತೃತ್ವದ ಶಿವಸೇನೆಗೆ ಸಂಜಯ ದೇಶಮುಖ್ (ಯವತ್ಮಾಳ್), ಸಂಜಯ ಜಾಧವ್ (ಪರ್ಭಾಣಿ), ಸಂಜಯ ದೀನಾ ಪಾಟೀಲ್ (ಮುಂಬೈ ಉತ್ತರ-ಪೂರ್ವ), ನಾಗೇಶ ಪಾಟೀಲ-ಅಷ್ಟೀಕರ್ (ಹಿಂಗೋಲಿ), ಓಂಪ್ರಕಾಶ ರಾಜೇನಿಂಬಾಳ್ಕರ್ (ಧಾರಾಶಿವ್) ಹಾಗೂ
ಭಾವುಸಾಹೇಬ್ ವಾಕ್ಚೌರೆ (ಶಿರ್ಡಿ) ಅವರು ಸೇರ್ಪಡೆಯಾಗಿದ್ದರು.
ಈ ಆರು ಸಂಸದರು ದಕ್ಷಿಣ ಮುಂಬೈನ ಯಶವಂತರಾವ್ ಚವಾಣ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಏಕನಾಥ ಶಿಂಧೆ ಹಾಗೂ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಶಿವಸೇನೆಗೆ ಸೇರ್ಪಡೆಯಾದರು.
ರಾಜಕೀಯ ಮಹತ್ವ ಏನು?
ಶಿಂಧೆ ಬಣಕ್ಕೆ ಸೇರ್ಪಡೆಯಾದ ಈ ಆರು ಸಂಸದರು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಅಭ್ಯರ್ಥಿಗಳನ್ನು ಸೋಲಿಸಿ ಗೆದ್ದಿದ್ದರು. ಇದೀಗ ಅವರ ಪಕ್ಷಾಂತರದಿಂದ ಮಹಾರಾಷ್ಟ್ರದ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ.
2024ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದಲ್ಲಿ ಒಟ್ಟು 9 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ಈಗ ಆ ಪೈಕಿ 6 ಮಂದಿ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾಗಿರುವುದರಿಂದ, ಶಿವಸೇನೆ ಒಳಗಿನ ಶಕ್ತಿ ಸಮತೋಲನದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.
ಈ ಬೆಳವಣಿಗೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ (ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು  ಎನ್‌ಸಿಪಿ-ಅಜಿತ್ ಪವಾರ್) ಏಕನಾಥ ಶಿಂಧೆಯ ರಾಜಕೀಯ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement